ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಕೆರೆ 47 ವರ್ಷಗಳ ನಂತರ ಕೋಡಿ ಹರಿದ ಹಿನ್ನೆಲೆಯಲ್ಲಿ ಸ್ಥಳೀಯರು ಕಾಸಿಗೊಂದು ಸೇರು ರಾಗಿ ಮಾರಿ ಸಂಪ್ರದಾಯ ಮುಂದುವರಿಸಿದರು. ಕೆರೆ ಕೋಡಿ ಬಿದ್ದಾಗ ಕಾಸಿಗೆ ಒಂದು ಸೇರು ಧಾನ್ಯ ಮಾರಿದ ಇತಿಹಾಸವಿದೆ. ಹುಳಿಯಾರು ಕೆರೆ ಅಪರೂಪಕ್ಕೆ ಕೋಡಿ ಹರಿದಿದ್ದು, ಜನರು ಸಂಭ್ರಮಿಸಿ ವಾಡಿಕೆಯಂತೆ ನಡೆದುಕೊಂಡಿದ್ದಾರೆ.
ರಾಗಿ ಬೆಳೆದವರು ಸ್ವಯಂ ಪ್ರೇರಣೆಯಿಂದ ಚೀಲಗಟ್ಟಲೆ ರಾಗಿ ತಂದು ದೇವಸ್ಥಾನ ಬಳಿ ಸುರಿದರು ಏನಕ್ಕೂ ಪ್ರಯೋಜನವಿಲ್ಲವೆಂದು ಮನೆಯ ಮೂಲೆಯಲ್ಲಿ ಬಿಸಾಕಿದ್ದ ತಾಮ್ರದ ಕಾಸುಗಳ ಹುಡುಕಾಟ, ತಡಕಾಟ ನಡೆಸಿ ಜನರು ರಾಗಿ ಕೊಂಡರು.
ಸಂಪ್ರದಾಯದ ಇತಿಹಾಸ: ಬರೋಬ್ಬರಿ 47 ವರ್ಷಗಳ ಬಳಿಕ ಅಂದರೆ 1975ರಲ್ಲಿ ಹುಳಿಯಾರು ಕೆರೆ ಕೋಡಿ ಹರಿದಿತ್ತು. ಸುಮಾರು ನಾಲ್ಕು ದಶಕಗಳಿಂದ ಗ್ರಾಮದ ಜನರು ಕೆರೆ ತುಂಬಿ ಹರಿಯುದನ್ನು ನೋಡಲು ಕಾಯುತ್ತಿದ್ದರು. ಈ ವರ್ಷದ ಮಳೆಗಾಲದ ಮಳೆ ಮತ್ತು ಚಂಡಮಾರುತ ಪರಿಣಾಮ ಸುರಿದ ಮಳೆಯಿಂದ ಕೆರೆ ಕೋಡಿ ತುಂಬಿ ಹರಿದಿದೆ. ಈ ಸಂತಸಕ್ಕೆ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ.
1975ರ ನಂತರ ಎರಡ್ಮೂರು ಬಾರಿ ಕೆರೆ ಮೈದುಂಬಿತ್ತಾದರೂ ಕೋಡಿ ಹರಿಯದೇ ಜನರಿಗೆ ನಿರಾಶೆ ಉಂಟಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಶಿವಪುರ ಕೆರೆಯಿಂದ ಕಾಲುವೆ ತೆಗೆದು ಹುಳಿಯಾರು ಕೆರೆಗೆ ನೀರು ಹರಿಸುವ ಪ್ರಯತ್ನ ಸಹ ಮಾಡಲಾಯಿತು. ಪ್ರತಿ ವರ್ಷ ಮಳೆ ಬಂದಾಗಲೆಲ್ಲಾ ತಿಮ್ಮಾಪುರ ಕೆರೆಯಿಂದ ಕಾಲುವೆ ಮೂಲಕ ಹುಳಿಯಾರು ಕೆರೆಗೆ ನೀರು ಹರಿಸಲಾಗುತ್ತಿತ್ತು. ಆದರೂ ಅರ್ಧ ಕೆರೆ ಆದ ನಂತರ ಕೆರೆಗೆ ನೀರು ಹತ್ತುತ್ತಿರಲಿಲ್ಲ. ಹಾಗಾಗಿ ಕೆರೆ ಮೈದುಂಬುತ್ತಿತ್ತೆ ಹೊರತು ಕೋಡಿ ಹರಿಯುತ್ತಿರಲಿಲ್ಲ.
ಈ ವರ್ಷದ ಮಳೆಗಾಲದ ವರುಣನ ಕೃಪೆಗೆ 15 ದಿನಗಳಲ್ಲಿ ಕೋಡಿ ತಾಗುವಷ್ಟು ನೀರು ಸಂಗ್ರಹವಾಗಿತ್ತು. ಆದರೆ ಮಳೆ ದೂರ ಆದ ನಂತರ ಕೋಡಿ ಹರಿದಿರಲಿಲ್ಲ. ಮೊನ್ನೆ ಮಾಂಡೌಸ್ ಚಂಡಮಾರುತಕ್ಕೆ ಸುರಿದ ಮಳೆಗೆ ಕೆರೆ ಕೋಡಿ ಹರಿದಿದೆ. ಇದಕ್ಕೆ ಗ್ರಾಮಸ್ಥರು ದೇವತೆಗಳಾದ ದುರ್ಗಮ್ಮ, ಹುಳಿಯಾರಮ್ಮ ಹಾಗೂ ಕೆಂಚಮ್ಮ ದೇವತೆ ಉತ್ಸವ ನಡೆಸಿದ್ದಾರೆ.
ಇದನ್ನೂ ಓದಿ: ಡಿ.20 ರಿಂದ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ