ತುಮಕೂರು: ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪೂರಕವಾದ ಭೂಮಿ ದೊರೆಯದ ಕಾರಣ ಬಹುತೇಕ ಕೈಗಾರಿಕೋದ್ಯಮಿಗಳು ತುಮಕೂರಿನತ್ತ ತಮ್ಮ ಚಿತ್ತ ಹರಿಸುತ್ತಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.
ತುಮಕೂರು ಹೊರವಲಯದ ವಸಂತ ನರಸಾಪುರ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿ ಹಲವು ಕೈಗಾರಿಕೆಗಳು ತಲೆಯೆತ್ತುತ್ತಿವೆ. ಈ ಕುರಿತಂತೆ ಸ್ವತ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಇಂದು ವಸಂತನರಸಾಪುರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ಈ ಮಾಹಿತಿ ನೀಡಿದರು.
ಬಹುತೇಕ ಖಾಸಗಿ ಕೈಗಾರಿಕೋದ್ಯಮಿಗಳು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಳ ಅಭಾವದ ಹಿನ್ನೆಲೆಯಲ್ಲಿ ನೆಲಮಂಗಲ ಮತ್ತು ದಾಬಸ್ ಪೇಟೆಗೆ ಸ್ಥಳಾಂತರಗೊಂಡಿದ್ದರು. ಆದರೆ ಅಲ್ಲಿಯೂ ಸುವ್ಯವಸ್ಥಿತ ಮೂಲಸೌಕರ್ಯದ ಕೊರತೆ ಅನುಭವಿಸಿದರು. ಹೀಗಾಗಿ ತುಮಕೂರಿನ ವಸಂತನರಸಾಪುರ ಕೈಗಾರಿಕಾಭಿವೃದ್ಧಿ ಪ್ರದೇಶದತ್ತ ಬರುವ ಆಸಕ್ತಿ ತೋರುತ್ತಿದ್ದಾರೆ. ಈ ಪ್ರದೇಶದಲ್ಲಿ ರಸ್ತೆ , ನೀರು, ವಿದ್ಯುತ್ ಸೌಲಭ್ಯವಿದ್ದು ಕೈಗಾರಿಕೆಗಳಿಗೆ ಪೂರಕ ವಾತಾವರಣವಿದೆ ಎಂದು ಹೇಳಿದ್ದಾರೆ.
ತುಮಕೂರಿನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಫುಡ್ ಪಾರ್ಕ್ನಲ್ಲಿ ಆಯೋಜಿಸಿದ್ದ ಸಭೆ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆಯಿತು. ಇದೇ ವೇಳೆ ಕೈಗಾರಿಕಾಭಿವೃದ್ಧಿಗೆ ಜಮೀನು ನೀಡಿರುವಂತೆ ರೈತರಿಗೂ ಕೂಡ ಉದ್ಯೋಗ ನೀಡಬೇಕೆಂಬ ಮಾತುಗಳು ಕೇಳಿಬಂತು. ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಬರುವಂತಹ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕೆಂಬ ನಿಯಮವನ್ನು ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ಹಾಕಲಾಗುವುದು.ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ದೇಶದಲ್ಲಿ ಆರ್ಥಿಕ ಹಿಂಜರಿತದಿಂದ ಕೈಗಾರಿಕಾ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ನೂತನ ಆದಾಯ ತೆರಿಗೆ ನೀತಿ ಜಿಎಸ್‌ಟಿ ಸೇರಿದಂತೆ ಆರ್ಥಿಕ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳಿಂದ ಕೈಗಾರಿಕಾ ವಲಯ ಚೇತರಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ಸಚಿವ ಶೆಟ್ಟರ್ ವ್ಯಕ್ತಪಡಿಸಿದ್ರು.