ತುಮಕೂರು : ಇಲ್ಲಿ ಮೋಜು ಮಾತ್ರ ನಡೆಯುತ್ತಿದೆ ಹೊರತು ನೌಕರಿ ನಡೆಯುತ್ತಿಲ್ಲ. ಸರ್ಕಾರದಿಂದ ಬರುವ ಅನುದಾನವನ್ನು ಯಾರೂ ಸಮರ್ಪಕವಾಗಿ ಖರ್ಚು ಮಾಡಲ್ಲ. ಬಡವರ ಮಕ್ಕಳಿಗಾಗಿ ಹಾಸ್ಟೆಲ್ ಕಟ್ಟೋಕೆ ಯೋಗ್ಯತೆ ಇಲ್ಲದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ತರಾಟೆ ತೆಗೆದುಕೊಂಡರು.
1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಿ ಎಂದು ಹೇಳಿದರೆ ನಮ್ ಮುಂದೆ ಬಂದು ಇಲ್ಲ-ಸಲ್ಲದ ಕಥೆ ಓದುತ್ತೀರಿ ಎಂದು ಸಚಿವರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ, ಪಾವಗಡದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆ ಸ್ವಾಧೀನಪಡಿಸಕೊಂಡ ಜಮೀನಿನ ವಿರುದ್ಧ ಭೂಮಿ ಮಾಲೀಕ ಬಗರ್ ಹುಕ್ಕುಂನಲ್ಲಿ ತನಗೆ ಸೇರಿದ್ದೆಂದು ಅರ್ಜಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಣಕ್ಕೆ ಹಿನ್ನೆಡೆಯಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಮತ್ತೆ ಸಿಡಿಮಿಡಿಕೊಂಡ ಸಚಿವರು, ಶಾಸಕರು ಅಭಿವೃದ್ಧಿಗಾಗಿ ಶ್ರಮಪಟ್ಟು ಅನುದಾನ ತರುತ್ತಾರೆ. ಆಗಿರುವ ವಿಚಾರ ತಿಳಿಸೋಕೆ ಏನಾಗಿತ್ತು? 26-27 ಕೋಟಿ ಹಣ ಬಳಕೆಯಾಗದೇ ಬಿದ್ದಿದೆ. ಜವಾಬ್ದಾರಿ ಇಲ್ಲವೇ ನಿಮಗೆ? ನಾನೇ ಕಾನೂನು ಮಂತ್ರಿಯಾಗಿದ್ದೆ. ಈ ವಿಚಾರವನ್ನು ಜಿಲ್ಲಾಡಳಿತ ಅಥವಾ ನನ್ನ ಗಮನಕ್ಕೆ ತಂದಿದ್ದೀರಾ ಎಂದು ಪ್ರಶ್ನಿಸಿದರು.