ತುಮಕೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಚುನಾವಣೆ ಫೆ. 23ರಂದು ನಡೆಯುತ್ತಿದ್ದು, ಹುಲಿಕಲ್ ನಟರಾಜ್ ನೇತೃತ್ವದ 6 ಸದಸ್ಯರುಳ್ಳ ಸಿಂಡಿಕೇಟ್ ಸದಸ್ಯರನ್ನು ಗೆಲ್ಲಿಸಬೇಕು ಎಂದು ಚಿಂತಕ ಹುಲಿಕಲ್ ನಟರಾಜ್ ಜನರಲ್ಲಿ ಮನವಿ ಮಾಡಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಆರ್ಥಿಕವಾಗಿ ಹಿಂದುಳಿದಿದ್ದು, ಅದನ್ನು ಸಬಲೀಕರಣ ಮಾಡಬೇಕಿದೆ. ಕೇವಲ ಸರ್ಕಾರದ ಅನುದಾನವನ್ನು ನಂಬಿಕೊಳ್ಳುವುದಕ್ಕಿಂತ ಜನರಿಂದ ಅನುದಾನ ಪಡೆದುಕೊಂಡು ಸಬಲೀಕರಣ ಮಾಡುವ ನಿಟ್ಟಿನಲ್ಲಿ ನಮ್ಮ ಸಿಂಡಿಕೇಟ್ನಿಂದ ಪ್ರತಿ ಜಿಲ್ಲೆಯಲ್ಲಿಯೂ ಒಂದು ವಿಜ್ಞಾನ ಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿಯ ಸಮಾಗಮದ ಹೆಸರಲ್ಲಿ ರಾಜ್ಯಾದ್ಯಂತ ಆಂದೋಲನ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಹಿಂದಿನ ಕಾಲದಲ್ಲಿ ಅಕ್ಷರ ಜಾಥಾ ಎಂದು ಶಾಲೆಗಳಲ್ಲಿ ಹೇಗೆ ಕಾರ್ಯಕ್ರಮ ರೂಪಿಸುತ್ತಿದ್ದರೋ, ಹಾಗೆಯೇ ಇಂದು ವಿಜ್ಞಾನ ಜಾಥಾದಿಂದ ವಾಹನಗಳ ಮೂಲಕ ಶಾಲೆ ಶಾಲೆಗಳಿಗೂ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ತಿಳಿ ಹೇಳುವ ಕಾರ್ಯ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಇನ್ನು ತುಮಕೂರು ಜಿಲ್ಲೆಯಿಂದ ಶಿವಕುಮಾರ್ ಸ್ಪರ್ಧಿಸುತ್ತಿದ್ದು, ಈ ಜಿಲ್ಲೆಯಲ್ಲಿ 173 ಮತದಾರರಿದ್ದಾರೆ. ಫೆ.23ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎಂಪ್ರೆಸ್ ಶಾಲೆಯಲ್ಲಿ ಮತದಾನ ನಡೆಯಲಿದೆ. ಮತದಾನದಲ್ಲಿ ವಿಜ್ಞಾನ ಪರಿಷತ್ ಸದಸ್ಯರು ಮತ ನೀಡಿ ನಮ್ಮನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.