ತುಮಕೂರು: ಸಿರಾ ತಾಲೂಕು ಮಾಗೋಡು ಗೊಲ್ಲರಹಟ್ಟಿಯಲ್ಲಿರುವ ಶ್ರೀ ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಇಂದು ಅದ್ಧೂರಿ ಹೂವಿನ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಐತಿಹಾಸಿಕ, ಆಧ್ಯಾತ್ಮಿಕವಾಗಿರೋ ಕ್ಷೇತ್ರಕ್ಕೆ ರಾಜ್ಯ ಸೇರಿದಂತೆ ಇತರೆ ರಾಜ್ಯದಿಂದಲೂ ಭಕ್ತರು ಬರುತ್ತಾರೆ. ನೂರಾರು ಭಕ್ತರು ಆದಿದೈವ ಶ್ರೀ ಕಂಬದರಂಗನಾಥ ಸ್ವಾಮಿಯ ಹೂವಿನ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ಮಾಗೋಡು ಶ್ರೀ ಕಂಬದ ರಂಗನಾಥ ಎಂದರೆ ಹೂವಿಗೆ ಪ್ರಸಿದ್ಧಿ. ಇಲ್ಲಿ ತಮ್ಮ ಇಷ್ಟಾರ್ಥ ಪ್ರಾಪ್ತಿಯಾದರೆ ಹೂವಿನ ತುಲಾಭಾರ ಸೇರಿದಂತೆ ಸಾವಿರಾರು ರೂಪಾಯಿಗಳ ಹೂವನ್ನು ತಂದು ಶ್ರೀ ಕಂಬದ ರಂಗನಾಥಸ್ವಾಮಿ ರಥಕ್ಕೆ ಭಕ್ತರು ಹಾಕುತ್ತಾರೆ.
ಇಲ್ಲಿ ಹೂವೇ ದೇವರಿಗೆ ಪ್ರಿಯವಾದ ವಸ್ತು. ಹೂವಿನ ಹಾರವನ್ನು ತೇರಿಗೆ ಹಾಕುವುದು ವಾಡಿಕೆ ಮಾತ್ರವಲ್ಲ, ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹರಕೆಯ ರೂಪದಲ್ಲಿ ಹೂವನ್ನು ಅರ್ಪಿಸುವುದು ಸಂಪ್ರದಾಯ.