ತುಮಕೂರು : ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಯುವಕರ ಮನಸ್ಸಿನಲ್ಲಿ ಮೋದಿ ಹೊರತುಪಡಿಸಿ ಬೇರೆ ಯಾರೂ ಇಲ್ಲ ಅಂತಾ ಬಿಂಬಿಸಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ತಿಳಿಸಿದರು.
ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ನಾನಾಗಲಿ ಅಥವಾ ಕಾಂಗ್ರೆಸ್ ಪಕ್ಷದ ಕುರಿತು ಇರುವುದಿಲ್ಲ. ಬದಲಾಗಿ ಮೋದಿ ಇರುತ್ತಾರೆ. ಪ್ರಧಾನಿ ಮೋದಿ ಅಧಿಕಾರ ಇದೆ ಎಂದು ಎಲ್ಲವನ್ನೂ ತಮ್ಮ ಹತೋಟಿಯಲ್ಲಿ ಇರಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಸಭೆಯಲ್ಲಿ ಕಾಂಗ್ರೆಸ್ನ ಪ್ರಭಾವಿ ಮುಖಂಡ ಕೆ.ಎನ್ ರಾಜಣ್ಣ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು. ಈ ಹಿಂದೆ ದೇವೇಗೌಡರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ನಂತರ ಹೈಕಮಾಂಡ್ ಸೂಚನೆ ಮೇರೆಗೆ ಕೆ.ಎನ್ ರಾಜಣ್ಣ ತಮ್ಮ ಉಮೇದುವಾರಿಕೆಯನ್ನು ವಾಪಸ್ ತೆಗೆದುಕೊಂಡಿದ್ದರು. ಆದರೆ, ಇಂದು ನಡೆದ ಸಭೆಯಲ್ಲಿ ಮಾತ್ರ ಪಾಲ್ಗೊಂಡಿರಲಿಲ್ಲ. ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಅವರ ನಡೆ ಜೆಡಿಎಸ್ ಮುಖಂಡರಿಗೆ ಮುಜುಗರ ಉಂಟಾಗುವಂತೆ ಮಾಡಿದೆ.
ಜಿಲ್ಲೆಯಲ್ಲಿ ತುಮಕೂರು ಲೋಕಸಭಾ ವ್ಯಾಪ್ತಿಗೆ ಸೇರಿದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್ ನಿರಂತರವಾಗಿ ಜಂಟಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಎಲ್ಲಿಯೂ ಕೂಡ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಮತ್ತು ಸಂಸದ ಮುದ್ದಹನುಮೇಗೌಡ ಕಾಣಿಸಿಕೊಳ್ಳದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇಂದು ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಟಿ.ಬಿ ಜಯಚಂದ್ರ , ಶಫಿ ಅಹಮದ್ ಮತ್ತು ಜೆಡಿಎಸ್ ಮುಖಂಡರಾದ ಬೆಮೆಲ್ ಕಾಂತರಾಜ್, ರಮೇಶ್ ಬಾಬು ಸೇರಿದಂತೆ ಹಲವರು ಭಾಗವಹಿಸಿದ್ದರು.