ತುಮಕೂರು: ಜಿಲ್ಲೆಯ ತಿಪಟೂರಿನಲ್ಲಿ ನಿನ್ನೆ(ಭಾನುವಾರ) ನಡೆದ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವೇದಿಕೆಯಲ್ಲಿ ಮಾತನಾಡಲು ಮುಂದಾದಾಗ ಅವರ ಪರವಾಗಿ ನಿರಂತರವಾಗಿ ಜೈಕಾರ-ಚಪ್ಪಾಳೆಗಳು ಕೇಳಿ ಬಂದವು. ಅಭಿಮಾನಿಗಳ ಈ ಅಬ್ಬರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, 'ನೀವು ಹೀಗೆ ಗಲಾಟೆ ಮಾಡಿದರೆ ಬಿ.ಸಿ.ನಾಗೇಶ್ ಅವರನ್ನು ಸೈಡಿಗೆ ಕಳುಹಿಸಿ ತಿಪಟೂರಿನಿಂದಲೇ ನಾನು ಚುನಾವಣೆಗೆ ನಿಲ್ಲಬೇಕಾಗುತ್ತದೆ' ಎಂದು ಹೇಳಿದರು. ವೇದಿಕೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಹೀಗೆ ಹೇಳಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ವಿಜಯೇಂದ್ರ ಈ ಮಾತನ್ನಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ವೇದಿಕೆಯಲ್ಲಿದ್ದರು.
ನಡೆದಾಡುವ ಸರ್ಕಾರ: ಸಿದ್ದಗಂಗೆಯ ಶಿವಕುಮಾರ ಸ್ವಾಮಿಗಳನ್ನು ನಾವು ನಡೆದಾಡುವ ದೇವರು ಅಂತಾ ಪೂಜೆ ಮಾಡ್ತೀವಿ. ಅದೇ ರೀತಿ ನಡೆದಾಡುವ ಸರ್ಕಾರ ತಂದಿರುವ ಕೀರ್ತಿ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಅವರು ಕೊಟ್ಟಿರುವ ಪ್ರತಿಯೊಂದು ಕಾರ್ಯಕ್ರಮಗಳು ಪ್ರತಿಯೊಂದು ಮನೆಗೆ ತಲುಪಿದೆ. ಯಡಿಯೂರಪ್ಪ ಅವರಿಗೆ ಈಗ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲ. ಹಾಗಿದ್ದರೂ ಅವರಿಗೆ ಕೋಟ್ಯಂತರ ಜನರು ತಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಕೊಟ್ಟಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಮನುಷ್ಯನಲ್ಲಿ ದೇವರನ್ನು ಕಾಣಬೇಕು: ಗುಡಿಯಲ್ಲಿ ದೇವರನ್ನು ಕಾಣೋದಕ್ಕಿಂತ ಮನುಷ್ಯನಲ್ಲಿ ದೇವರನ್ನು ಕಾಣಬೇಕಿದೆ. ಪ್ರತಿಯೊಂದು ಧರ್ಮವೂ ಕೂಡ ದಾನದ ಮಹತ್ವ ಸಾರಿದೆ. ಕಾಣಿಕೆ ಹಾಕ್ತೀವಿ, ಅನ್ನದಾನ ಮಾಡ್ತೀವಿ. ಎಲ್ಲಕ್ಕಿಂತ ಮಿಗಿಲಾದ ದಾನ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಹಿಂಸೆಯನ್ನು ಕೊಡದೆ ಜೀವನ ಸಾಗಿಸುವುದು. ಇಂದು ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅನ್ನೋದನ್ನು ನಾನು ಹೇಳಬೇಕಿಲ್ಲ. ಈ ಸಮಾಜವನ್ನು ಸರಿ ದಾರಿಯಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ಈ ವೇದಿಕೆಯಲ್ಲಿರುವ ಹರಗುರುಚರ ಮೂರ್ತಿಗಳಲ್ಲಿ ಎಷ್ಟಿದೆಯೋ, ವೇದಿಕೆ ಮುಂದೆ ಇರುವ ಎಲ್ಲರಿಗೂ ಅಷ್ಟೇ ಜವಾಬ್ದಾರಿ ಇದೆ ಎಂದರು.
ಇಂದು ಜ್ಯೋತಿಯಲ್ಲಿ ಬೆಳಕು ಕಾಣುವ ಅವಶ್ಯಕತೆ ಬಹಳ ಇದೆ. ಆದರೆ ದೀಪದಲ್ಲಿ ಬೆಂಕಿಯನ್ನು ಕಾಣ್ತಿರೋ ಜನ ಹೆಚ್ಚು ಬೆಳೀತಾ ಇದ್ದಾರೆ. ವೀರಶೈವ ಲಿಂಗಾಯಿತ ಸಮಾಜ ದೊಡ್ಡ ಆಲದಮರ ಇದ್ದ ಹಾಗೆ. ನಮ್ಮ ಸಮಾಜದ ನಡತೆ, ಸಮಾಜದ ನಾಯಕರ ನಡತೆ ಅಷ್ಟೇ ಮುಖ್ಯ. ಈ ಶತಮಾನ ಯುವಕರಿಗೆ ಸೇರಿರುವ ಶತಮಾನ. ಆದರೆ ಇಂದಿನ ಯುವಕರು ದಾರಿ ತಪ್ಪಿ ಬೇರೆ ವ್ಯಸನಗಳಿಗೆ ತುತ್ತಾಗುತ್ತಿರುವುದನ್ನು ನೋಡುತ್ತಿದ್ದೇವೆ. ಯುವಕರು ಸರಿ ದಾರಿಯಲ್ಲಿ ಹೋದಲ್ಲಿ ಮಾತ್ರ ದೇಶ ಮುನ್ನಡೆಯಲು ಸಾಧ್ಯ. ಯುವಕರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾಡಿನ ಸೇವೆ ಮಾಡಲು ಸಿದ್ಧ: ನಾನು ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ. ಏನೇ ಸವಾಲು ಬಂದರೂ ಮೆಟ್ಟಿನಿಲ್ಲೋ ಶಕ್ತಿಯನ್ನು ಯಡಿಯೂರಪ್ಪ ಹಾಗೂ ರಾಜ್ಯದ ಜನ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಏಳು-ಬೀಳುಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಏನೇ ಸಮಸ್ಯೆ ಬಂದರೂ, ಸೋಲಾದರೂ ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ನಾಡಿನ ಸೇವೆ ಮಾಡೋಕೆ ಸಿದ್ದನಿದ್ದೇನೆ. ಅದಕ್ಕೆ ನಿಮ್ಮ ಆಶೀರ್ವಾದ ಇರಬೇಕೆಂದರು.
ಇದನ್ನೂ ಓದಿ: ಯಡಿಯೂರಪ್ಪರನ್ನ ಸೈಡ್ಲೈನ್ ಮಾಡಲು ಸಾಧ್ಯವೇ ಇಲ್ಲ: ವಿಜಯೇಂದ್ರ