ತುಮಕೂರು : ಹೇಮಾವತಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ನಾಲೆಗಳ ಮೂಲಕ ಹರಿದು ಬರುತ್ತಿರುವ ಹಿನ್ನೆಲೆ ಜಿಲ್ಲೆಯ ನಾಲಾ ವ್ಯಾಪ್ತಿಯಲ್ಲಿ ಬರುವ ಕೋಡಿ ಬಿದ್ದ ಕೆರೆಗಳು ತುಂಬಿ ಹರಿಯುತ್ತಿವೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ.
ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತುಮಕೂರು ತಾಲೂಕಿನ ಬಹುತೇಕ ಕೆರೆಗಳಿಗೆ ಹೇಮಾವತಿ ನೀರು ಬಿಡುಗಡೆ ಹಿನ್ನೆಲೆ ಈ ರೀತಿಯ ವಾತಾವರಣ ನಿರ್ಮಾಣವಾಗಿದೆ. ಇನ್ನೊಂದೆಡೆ ಕಳೆದೆರಡು ದಿನಗಳಿಂದ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆ ಕೆರೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ.
ಮಳೆ ಹಾಗೂ ನದಿ ನೀರು ಸೇರಿ ಕೋಡಿ ಹರಿಯುತ್ತಿರುವ ಕೆರೆ-ಕಟ್ಟೆಗಳನ್ನು ನೋಡಿ ರೈತರ ಮುಖದಲ್ಲಿ ಸಂತಸ ಮೂಡಿದೆ. ತುಂಬಿ ಹರಿಯುತ್ತಿರುವ ಮಲ್ಲಘಟ್ಟ, ಚೆಂಗಾವಿ, ಇಡಗೂರು, ಮಾವಿನಹಳ್ಳಿ ಕೆರೆಗಳು ತುಂಬಿ ಹರಿಯುತ್ತಿವೆ. ಹತ್ತಾರು ವರ್ಷಗಳಿಂದ ನೀರಿಲ್ಲದೆ ಬರಡಾಗಿದ್ದ ಕೆರೆಗಳಲ್ಲಿ ಇದೀಗ ನೀರು ಬಂದಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಾಣವಾಗಿದೆ.