ತುಮಕೂರು : ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಕೊರಟಗೆರೆ, ಮಧುಗಿರಿ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ ತಾಲೂಕಿನ ವ್ಯಾಪ್ತಿಯಲ್ಲಿನ ಹಳ್ಳಗಳು ತುಂಬಿ ಹರಿಯುತ್ತಿವೆ.
ಹಳ್ಳಗಳು ಕೋಡಿಬಿದ್ದು ಗ್ರಾಮಗಳು ಜಲಾವೃತ : ಈ ಹಳ್ಳಗಳ ನೀರಿನಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ತುಂಬಿ ಹರಿಯುತ್ತಿರುವ ನೀರಿನ ನಡುವೆಯೇ ಬೈಕ್ ಸವಾರರು ಸಾಗುತ್ತಿರುವ ದೃಶ್ಯ ಕಂಡುಬಂದಿದೆ. ಅಲ್ಲದೆ ಬೈಕ್ ಸವಾರನೋರ್ವ ತುಂಬಿ ಹರಿಯುತ್ತಿರುವ ನೀರಿನಲ್ಲಿ ಸಾಗಲು ಮುಂದಾಗಿ ನೀರಿನಲ್ಲಿ ಸಿಲುಕಿದ್ದಾಗ ಸ್ಥಳೀಯರು ಬಂದು ಬೈಕ್ ಹಾಗೂ ವ್ಯಕ್ತಿಯನ್ನು ರಕ್ಷಿಸಿರುವ ಘಟನೆಯೂ ನಡೆದಿದೆ.
ಇನ್ನು, ಗುಬ್ಬಿ ತಾಲೂಕಿನ ಕಲ್ಲೂರು ಕೆರೆಗೂ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂಚಿಹಳ್ಳಿ ಗ್ರಾಮ ಜಲಾವೃತ : ಭಾರಿ ಮಳೆಗೆ ತುಮಕೂರು ತಾಲೂಕಿನ ಹಂಚಿಹಳ್ಳಿ ಗ್ರಾಮ ಜಲಾವೃತಗೊಂಡಿದ್ದು, ನೂರಾರು ಎಕರೆ ತೆಂಗು ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಮುಳುಗಿವೆ.
ಶನಿವಾರ ರಾತ್ರಿ ಸುರಿದ ದಿಢೀರ್ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಲ್ಲಿ ತೊಯ್ದು ಹೋಗಿವೆ. ಹೀಗಾಗಿ ಜನರು ದವಸ ಧಾನ್ಯಗಳನ್ನು ನೀರಿನ ನಡುವೆಯೂ ಮನೆಗಳಿಂದ ಹೊರ ತಂದು ರಸ್ತೆಯಲ್ಲಿ ಒಣಗಿಸುತ್ತಿದ್ದಾರೆ. ಕಂಚಿಹಳ್ಳಿ ಗ್ರಾಮದ ಸಮೀಪ ಇರುವ ಹೆಬ್ಬಾಳ ಕೆರೆಯ ಕೋಡಿ ಭಾಗವನ್ನು ಎರಡು ಅಡಿ ಎತ್ತರಿಸಿರುವುದರಿಂದ ಕೆರೆಯಲ್ಲಿನ ನೀರು ಹಂಚಿಹಳ್ಳ ಗ್ರಾಮಕ್ಕೆ ನುಗ್ಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ : ಶರಾವತಿ ವಿದ್ಯುತ್ಗಾರದ ಸೆಕ್ಯೂರಿಟಿ ಮೇಲೆ ಪಿಎಸ್ಐ ಹಲ್ಲೆ ಆರೋಪ: ವಿಡಿಯೋ ವೈರಲ್