ತುಮಕೂರು : ತಾಲೂಕಿನ ಗೂಳೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ನಿಮಜ್ಜನೆಗೆ ನಿಗದಿಪಡಿಸಲಾಗಿದ್ದ ನಿರ್ದಿಷ್ಟ ದಿನಾಂಕವನ್ನು ಮುಂದೂಡಲಾಗಿದ್ದು, ಈ ಬಾರಿಯೂ ಶಾಸ್ತ್ರೋಕ್ತವಾಗಿ ನಿಮಜ್ಜನೆಗೆ ವಿಘ್ನ ಎದುರಾಗಿದೆ.
ಡಿ.18 ಮತ್ತು 19 ರಂದು ಬೃಹತ್ ಗಣೇಶ ಮೂರ್ತಿಯನ್ನು ನಿಮಜ್ಜನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದ್ರೆ, ಗ್ರಾಪಂ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ 2021ರ ಜ.9 ಹಾಗೂ 10 ರಂದು ಗ್ರಾಮದ ಕೆರೆಯಲ್ಲಿ ನಿಮಜ್ಜನ ಮಾಡಲು ನಿರ್ಧರಿಸಲಾಗಿದೆ.
ಕಳೆದ ವರ್ಷವೂ ಕೂಡ ಗಣೇಶ ಮೂರ್ತಿಯನ್ನು ದೇಗುಲದಿಂದ ಹೊರತಂದ ನಿಮಜ್ಜನ ಮಾಡಲು ಸಿದ್ಧತೆ ನಡೆಸುತ್ತಿರುವಾಗಲೇ ಭಾರಿ ಮಳೆ ಬಂದಿತ್ತು. ಹೀಗಾಗಿ ಗಣೇಶ ಮೂರ್ತಿಯನ್ನು ಬಾಗಿಲಲ್ಲೇ ಸುಮಾರು 15 ದಿನಗಳ ಕಾಲ ಇಟ್ಟು ಪೂಜೆ ಸಲ್ಲಿಸಿ ನಂತರ ಶಾಸ್ತ್ರೋಕ್ತವಾಗಿ ದಿನಾಂಕ ನಿಗದಿಪಡಿಸಿ ನಿಮಜ್ಜನ ಮಾಡಲಾಗಿತ್ತು. ಗಣೇಶಮೂರ್ತಿ ನಿಮಜ್ಜನೆಗೆ ಕಳೆದ ವರ್ಷದಂತೆ ಈ ಬಾರಿಯೂ ನಿಗದಿತ ಅವಧಿಯಲ್ಲಿ ನಿಮಜ್ಜನ ಮಾಡಲು ಗ್ರಾಪಂ ಚುನಾವಣೆ ವಿಘ್ನವಾಗಿದೆ.
ಓದಿ: ತುಮಕೂರಿನಲ್ಲಿ 1,519 ಸ್ಥಾನಗಳಿಗೆ ಸಲ್ಲಿಕೆಯಾಗದ ಉಮೇದುವಾರಿಕೆ
ಇತಿಹಾಸ ಪ್ರಸಿದ್ಧ ಗೂಳೂರು ಗಣಪತಿ ಆರಂಭವಾದದ್ದು ಬೃಗ ಮಹರ್ಷಿ ಎಂಬುವರ ಕಾಲಘಟ್ಟದಲ್ಲಿ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಬೃಹತ್ ಗಣೇಶಮೂರ್ತಿಯನ್ನು ತಯಾರಿಸಲು ಆರಂಭಿಸಲಾಗುತ್ತದೆ. ಶಾಸ್ತ್ರೋಕ್ತವಾಗಿ 18 ಕೋಮಿನ ಜನರು ಗ್ರಾಮದ ಕೆರೆಯ ಬಳಿ ತೆರಳಿ ಪುಟ್ಟದಾದ ಗಣೇಶ ಮೂರ್ತಿಯನ್ನು ತಂದು ಗ್ರಾಮದಲ್ಲಿ ಬೃಹತ್ ಗಣೇಶಮೂರ್ತಿಯನ್ನು ತಯಾರಿಸಲು ಆರಂಭಿಸುತ್ತಾರೆ.
ಬಲಿಪಾಡ್ಯಮಿಯಂದು ಗಣೇಶ ಮೂರ್ತಿಗೆ ದೃಷ್ಟಿ ಪೆಟ್ಟನ್ನು ಇರಿಸಿ ಒಂದು ತಿಂಗಳ ಕಾಲ ನಿರಂತರವಾಗಿ ಪೂಜಿಸಲಾಗುವುದು. ಆನಂತರ ಬೃಹತ್ ಗಣೇಶಮೂರ್ತಿಯನ್ನು ಗ್ರಾಮದ ಕೆರೆಯಲ್ಲಿ ನಿಮಜ್ಜನ ಮಾಡಲಾಗುವುದು.
ಈ ರೀತಿಯಾದ ಪೂಜಾ ಪದ್ಧತಿ ತುಮಕೂರು ತಾಲೂಕಿನ ಗೂಳೂರು ಗ್ರಾಮದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿತ್ತು. ಆದರೆ, ಕಳೆದ ವರ್ಷ ಗಣೇಶ ನಿಮಜ್ಜನ ಮಾಡುವ ಸಂದರ್ಭದಲ್ಲಿ ಮಳೆಯಿಂದ 15 ದಿನಗಳ ಕಾಲ ಮುಂದೂಡಲಾಗಿತ್ತು. ಈ ಬಾರಿಯೂ ಕೂಡ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಗಣೇಶ ನಿಮಜ್ಜನೆಗೆ ವಿಘ್ನ ಎದುರಾಗಿದ್ದು, 15 ದಿನಗಳ ಕಾಲ ಮುಂದೂಡಲಾಗಿದೆ.