ತುಮಕೂರು : ತಾಲೂಕಿನ ಗೂಳೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಯನ್ನು ಡಿ.15ರಂದು ನಿಮಜ್ಜನ ಮಾಡಲು ನಿರ್ಧರಿಸಲಾಗಿದೆ ಎಂದು ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ. ಟಿ. ಶಿವಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಪ್ರತಿವರ್ಷದಂತೆ ದೀಪಾವಳಿ ಹಬ್ಬದಂದು ಪ್ರತಿಷ್ಠಾಪನೆ ಮಾಡುವಂತಹ ಗಣೇಶನ ಮೂರ್ತಿಯನ್ನು ಒಂದು ತಿಂಗಳ ನಂತರ ನಿಮಜ್ಜನ ಮಾಡುವ ಪದ್ಧತಿ ಅನುಸರಿಸಲಾಗಿದೆ. ಅದರಂತೆ ಈ ವರ್ಷ ಡಿಸೆಂಬರ್ 1ರಂದು ಗೂಳೂರಿನ ಕೆರೆಯಲ್ಲಿ ನಿಮಜ್ಜನ ಮಾಡಲು ನಿರ್ಧರಿಸಲಾಗಿತ್ತು.
ಆದರೆ ಗೂಳೂರಿನಲ್ಲಿ ಸಾಕಷ್ಟು ಮಳೆಯಾಗಿರುವ ಹಿನ್ನೆಲೆಯಲ್ಲಿ ಗಣಪತಿ ನಿಮಜ್ಜನಾ ಮಹೋತ್ಸವಕ್ಕೆ ಅನಾನುಕೂಲವಾದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಗಣಪತಿ ಭಕ್ತ ಮಂಡಳಿ ಸದಸ್ಯರು ಮತ್ತು ಪುರೋಹಿತರು ಸಭೆ ಸೇರಿ ಡಿಸೆಂಬರ್ 15ರಂದು ನಿಮಜ್ಜನ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.