ತುಮಕೂರು: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಗೆ ಗುಬ್ಬಿ ಮತ್ತು ಶಿರಾ ತಾಲೂಕಿನ ಜನರು ಸರಿಯಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿ ಎರಡೂ ತಾಲೂಕುಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಬೇಕಿದೆ ಎಂದು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಬ್ಬಿ ಮತ್ತು ಶಿರಾ ತಾಲೂಕು ವ್ಯಾಪ್ತಿಯ ಕೆಲವೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದ್ರೂ ಕೂಡ ಗ್ರಾಮೀಣ ಪ್ರದೇಶಗಳ ಜನರು ಮಾತು ಕೇಳುತ್ತಿಲ್ಲ. ನಿಯಮ ಪಾಲಿಸುತ್ತಿಲ್ಲ. ಲಾಕ್ಡೌನ್ ಮಾಡಿದ್ರೆ ಅವರಿಗೆ ಬುದ್ಧಿ ಬರುತ್ತೆ. ಹಾಗಾಗಿ ಅವಶ್ಯಕ ಇರುವ ಹಳ್ಳಿಗಳಲ್ಲಿ ಲಾಕ್ಡೌನ್ ಮಾಡುವುದು ಸೂಕ್ತವೆಂದು ಸಲಹೆ ನೀಡಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಕೊರೊನಾ ಸೋಂಕಿಗೆ ಪತ್ರಕರ್ತ ಬಲಿ
ನಗರ ಪ್ರದೇಶದ ಜನರು ಲಸಿಕೆ ಪಡೆದು ಗುಣಮುಖರಾಗುತ್ತಿದ್ದಾರೆ. ಆದ್ರೆ ಕೆಲ ಗ್ರಾಮೀಣ ಭಾಗಗಳಲ್ಲಿ ಅನುಮತಿಯಿಲ್ಲದೇ ಜಾತ್ರೆ, ಅಕ್ರಮ ಜೂಜಾಟದಲ್ಲಿ ಜನರು ಭಾಗವಹಿಸಿದ ಪರಿಣಾಮ ಸೋಂಕು ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ. ಸೋಂಕು ನಿಯಂತ್ರಣವಾಗುವುದೆಂದು ಮೂಢನಂಬಿಕೆಯಿಂದ ಜನರು ಕದ್ದು ಮುಚ್ಚಿ ಪೂಜೆ, ಹವನ ಮಾಡುತ್ತಿದ್ದಾರೆ. ಇದು ಕೂಡ ಹಳ್ಳಿಗಳಲ್ಲಿ ಸೋಂಕು ಹೆಚ್ಚಲು ಕಾರಣವಾಗಿದೆ. ಇದಕ್ಕೆಲ್ಲ ಹಳ್ಳಿಯ ಜನರು ಮಾರು ಹೋಗದೆ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಿ ಕೋವಿಡ್ ನಿಗ್ರಹಕ್ಕೆ ಸಹಕರಿಸುವಂತೆ ಮನವಿ ಮಾಡಿದರು.