ತುಮಕೂರು: ನಗರದ ಸಮಾನ ಮನಸ್ಕ ತಂಡವು ಕೊರೊನಾ ಸೋಂಕಿತರಿಗೆ ಉಚಿತವಾಗಿ ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿದೆ.
ಹೆಚ್ಚಿನ ಚಿಕಿತ್ಸೆ ಪಡೆಯಲು ನಿರಂತರ ಹರಸಾಹಸ ಪಡುತ್ತಿದ್ದ ಅನೇಕ ಕೊರೊನಾ ಸೋಂಕಿತರಿಗೆ ಅಗತ್ಯವಿರುವ ಸೌಲಭ್ಯವನ್ನು ನೀಡುವಲ್ಲಿ ಸಮಾನ ಮನಸ್ಕ ತಂಡವು ಯಶಸ್ವಿಯಾಗಿದೆ.
ತುಮಕೂರಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೊರೊನಾ ಸೋಂಕಿತರು ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ಬೆಂಗಳೂರಿಗೆ ಹೋಗಬೇಕಿತ್ತು ಈ ಸಂದರ್ಭದಲ್ಲಿ ಹೆಚ್ಚು ಹಣ ಪಾವತಿಸಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ತುಮಕೂರಿನ ಸಮಾನಮನಸ್ಕರ ತಂಡವು ಉಚಿತವಾಗಿ ವೆಂಟಿಲೇಟರ್ ಇರುವಂತಹ ಆಂಬ್ಯುಲೆನ್ಸ್ ಸೇವೆಯನ್ನು ಸದ್ದಿಲ್ಲದೆ ಒದಗಿಸುತ್ತಿದೆ.
ತುಮಕೂರಿನ ಗೌಸ್ ಪಾಷಾ, ಮನ್ಸೂರ್ ಅಹಮದ್, ಇಕ್ಬಾಲ್ ಅಹ್ಮದ್ ಸಮಾನ ಮನಸ್ಕರ ತಂಡವು ವೆಂಟಿಲೇಟರ್ ಸೌಲಭ್ಯವಿರುವ ಆಂಬ್ಯುಲೆನ್ಸ್ ಸೇವೆ ಸಲ್ಲಿಸುತ್ತಿದೆ. ಕೊರೊನಾ ಸೋಂಕಿನ ಹರಡುವಿಕೆ ಸಂದರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿಗೆ ತುಮಕೂರಿನಿಂದ ವಿವಿಧ ಆಸ್ಪತ್ರೆಗಳಿಗೆ ಮತ್ತು ಬೆಂಗಳೂರಿನ ಆಸ್ಪತ್ರೆಗಳಿಗೆ ಬಡವರಿಗೆ ಇಂತಹ ಅತ್ಯುನ್ನುತ ವೈದ್ಯಕೀಯ ಸೌಲಭ್ಯವನ್ನು ಉಚಿತವಾಗಿ ನೀಡುವಲ್ಲಿ ಈ ತಂಡ ಯಶಸ್ವಿಯಾಗಿದೆ.
ಯಾವುದೇ ರೀತಿಯ ಜಾತಿ ಮತದ ಭೇದವಿಲ್ಲದೆ ನಿಸ್ವಾರ್ಥ ಸೇವೆಯನ್ನು ಈ ತಂಡವು ಉನ್ನತ ವೈದ್ಯಕೀಯ ಸೌಲಭ್ಯದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿರುವುದು ಶ್ಲಾಘನೆಗೆ ಪಾತ್ರವಾಗಿದೆ.