ತುಮಕೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರೋ ಶಾಸಕ ಸಿ ಟಿ ರವಿ ನಾಲಿಗೆಯನ್ನು ಇಟ್ಟಿಗೆ ತಗೊಂಡು ಉಜ್ಜಿ ಸರಿ ಮಾಡಬೇಕು ಎಂದು ಮಾಜಿ ಶಾಸಕ ಕೆ. ಎನ್ ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ನಗರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಯಾರ್ರೀ ಅವನು ಸಿಟಿ ರವಿ?, ಯಾರ್ರೀ ಇವರೆಲ್ಲಾ. ಸ್ವಾತಂತ್ರ ಬರೋವಾಗ ಇವರೆಲ್ಲಾ ಹುಟ್ಟೇ ಇರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ಎಷ್ಟು ಕಷ್ಟ ಅನುಭವಿಸಿದ್ದಾರೆ. ಅದರ ಪರಿಚಯ ಇದ್ಯಾ ಇವರಿಗೆ? ಆರ್ಎಸ್ಎಸ್ ಸಂಘಟನೆಯಲ್ಲಿ ಚೆನ್ನಾಗಿ ಭಾಷಣ ಮಾಡೋದನ್ನು ಹೇಳಿಕೊಟ್ಟಿದ್ದಾರೆ. ಅದನ್ನೇ ಇವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಣ್ಣತನದ ಪರಮಾವಧಿ: ಆಲಮಟ್ಟಿ ಡ್ಯಾಂಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹೆಸರನ್ನ ಬದಲಾಯಿಸಿ ವಾಜಪೇಯಿ ಹೆಸರಿಡೋಕೆ ಆಗುತ್ತಾ?. ಇನ್ನೊಂದು ಬಡವರ ಪರ ಯೋಜನೆ ತಂದು ಹೆಸರಿಡಲಿ. ರಾಜೀವ್ ಗಾಂಧಿ ಹೆಸರು ಬದಲಾಯಿಸಿ ಧ್ಯಾನ್ ಚಂದ್ ಹೆಸರಿಡೋದು ಸಣ್ಣತನದ ಪರಮಾವಧಿ ಎಂದು ಅಭಿಪ್ರಾಯಪಟ್ಟರು.
ಅಪಚಾರ ಮಾಡಿದಂಗೆ ಆಗುತ್ತೆ: ಇನ್ನೊಂದು ಯಾವುದಾದರೂ ಪ್ರಶಸ್ತಿ ಮಾಡ್ಲಿ, ಧ್ಯಾನ್ ಚಂದ್ ಹೆಸರಿಡಲಿ. ಯಾರ್ ಬೇಡ ಅಂತಾರೆ. ರಾಜೀವ್ ಗಾಂಧಿ ಹೆಸರು ಬದಲಾಯಿಸೋದರಿಂದ ಅವರು ದೇಶಕ್ಕೆ ಕೊಟ್ಟ ಕೊಡುಗೆಗಳಿಗೆ ಅಪಚಾರ ಮಾಡಿದಂಗೆ ಆಗುತ್ತೆ ಎಂದರು. ಇಂದಿರಾ ಗಾಂಧಿ ಹೆಸರು ಇಡೀ ಪ್ರಪಂಚಕ್ಕೆ ಗೊತ್ತು. ಇಂಡಿಯಾ ಅಂದ್ರೆ ಇಂದಿರಾ ಅಂತಾ. ಇಡೀ ದೇಶದಲ್ಲಿ ಅತಿ ಹೆಚ್ಚು ಜನರ ಮನಸಲ್ಲಿ ಉಳಿದ ಪ್ರಧಾನಿ ಅವರು ಎಂದರು.
ಓದಿ: ಜಲಸಿರಿ ಯೋಜನೆಗೆ ನನ್ನ ಶ್ರಮವಿದೆ, ಬಿಜೆಪಿ ಈ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ: ಮಾಜಿ ಶಾಸಕ ಲೋಬೋ ಆರೋಪ