ತುಮಕೂರು: ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಎಲ್ಲ ಸ್ವಾಮೀಜಿಗಳನ್ನ ಸೇರಿಸಿ ಅವರನ್ನೇ ಎಂಎಲ್ಎ, ಮಂತ್ರಿ ಮಾಡಿ ಬಿಡಬೇಕು. ಆಗ ಈ ಸಮಸ್ಯೆ ಬಗೆಹರಿಯಬಹುದಷ್ಟೇ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಇಲ್ಲಾ ಅಂದರೆ ಇದಕ್ಕೆ ಅಂತ್ಯವೇ ಇರುವುದಿಲ್ಲ. ಕುಂಬಾರರು, ಮಡಿವಾಳರು ಈ ರೀತಿ ಮೀಸಲಾತಿ ಕೇಳಿದರೆ ಪರವಾಗಿಲ್ಲ. ತಳ ಸಮುದಾಯದ ಶೋಷಿತರು ಮೀಸಲಾತಿ ಕೇಳೋದರಲ್ಲಿ ಅರ್ಥ ಇದೆ ಎಂದರು.
ಲಿಂಗಾಯತರು 2ಎ ಗೆ ಬಂದರೆ ಕುರುಬರೆಲ್ಲಾ ಸತ್ತೋಗ್ತಾರೆ. 2ಎ ನಲ್ಲಿ ಹೆಚ್ಚು ಫಲಾನುಭವಿಗಳು ಕುರುಬರೇ ಇರೋದು. ಅವರೇನಾದರೂ 2ಎ ಗೆ ಬಂದರೆ ಕುರುಬರನ್ನ ಸಾಯಿಸೇಬಿಡ್ತಾರೆ ಎಂದು ಹೇಳಿದರು.
ಮೀಸಲಾತಿಗೆ ಪರಿಹಾರ ಅಂದರೆ ನೀವೇ ತೀರ್ಮಾನ ಮಾಡ್ರಪ್ಪ ಅಂತಾ ಅಧಿಕಾರವನ್ನ ಸ್ವಾಮೀಜಿಗಳಿಗೆ ಕೊಟ್ಟು ಬಿಡಬೇಕು. ಲಿಂಗಾಯಿತ ಅಭಿವೃದ್ಧಿ ನಿಗಮ ಆಯ್ತು, ಒಕ್ಕಲಿಗರು ಯಾಕೆ ಕೇಳಬಾರದು. ಅವರ ಸರಿಸಮನಾಗಿ ನಮಗೂ 500 ಕೋಟಿ ಕೊಡಿ, ನಿಗಮ ಮಾಡಿ ಅಂತಾ ಕೇಳಲಿ. ಜಾತಿಗೊಂದು ನಿಗಮ ಮಾಡಿ ಸರ್ಕಾರವೇ ತಪ್ಪು ನಿರ್ಧಾರ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.
ಎಸ್ಸಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಇಲ್ವಾ. ಇದರಲ್ಲಿ ಆದಿ ಜಾಂಬವ, ಬಂಜಾರ, ಬೋವಿ ಅಭಿವೃದ್ಧಿ ನಿಗಮಗಳು ಏಕೆ ಬೇಕು ಎಂದರು.