ತುಮಕೂರು: ಲಾಕ್ಡೌನ್ ಜಾರಿಯಲ್ಲಿದ್ದರೂ ಕೆಲ ಪ್ರದೇಶಗಳಲ್ಲಿ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ವಿಶೇಷವಾದ 'ಫೂಟ್ ಪ್ಯಾಟ್ರೋಲಿಂಗ್' ಮಾಡುತ್ತಿದೆ.
ಜಿಲ್ಲೆಯ ಪ್ರತೀ ನಗರ ಪ್ರದೇಶ ಹಾಗೂ ತಾಲೂಕು ಕೇಂದ್ರಗಳಲ್ಲಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದನ್ನು ಜಾರಿಗೆ ತರಲಾಗಿದೆ. ಇಂದು ತುಮಕೂರು ನಗರದ ಅನೇಕ ಬಡಾವಣೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಇದಕ್ಕೆ ಚಾಲನೆ ನೀಡಿದರು.
15ರಿಂದ 20 ಮಂದಿ ಪೊಲೀಸ್ ಸಿಬ್ಬಂದಿಯೊಂದಿಗೆ ಕಾಲ್ನಡಿಯಲ್ಲಿ ತೆರಳುವ ಪೊಲೀಸರು ಮತ್ತು ಅಧಿಕಾರಿಗಳು, ಬೇಕಾಬಿಟ್ಟಿಯಾಗಿ ಓಡಾಡುವ ಹಾಗೂ ನಿಯಮ ಉಲ್ಲಂಘನೆ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಜನತಾ ಕರ್ಫ್ಯೂ ಸಮರ್ಥ ಪಾಲನೆಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಪ್ರತೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5 ಮಂದಿ ಪೊಲೀಸ್ ಸಿಬ್ಬಂದಿ ನಿತ್ಯ ಕನಿಷ್ಠ 2 ಗಂಟೆ ಅವಧಿಯವರೆಗೆ ಫೂಟ್ ಪ್ಯಾಟ್ರೋಲಿಂಗ್ ಮಾಡುತ್ತಾರೆ.