ತುಮಕೂರು: ತಿಪಟೂರಿನಲ್ಲಿ ಶಿಕ್ಷಣ ಸಚಿವ ನಾಗೇಶ್ ಅವರ ಮನೆಗೆ ಮುತ್ತಿಗೆ ಹಾಕಿ ಬಂಧಿತರಾಗಿ ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಎನ್ಎಸ್ಯುಐ ಕಾರ್ಯಕರ್ತರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಬಳಿಕ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳಿಂದ ಬಂಧಿತರಾಗಿರುವ ಎನ್ ಎಸ್ ಯು ಐ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣದ ಬಗೆಗೆ ಮಾಹಿತಿ ಪಡೆದರು. ಈ ವೇಳೆ ಡಿ ಕೆ ಶಿವಕುಮಾರ್ ಅವರೊಂದಿಗೆ ಕುಣಿಗಲ್ ಶಾಸಕ ರಂಗನಾಥ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಸೇರಿದಂತೆ ವಿವಿಧ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ರಾಜ್ಯಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಬೇರೆ ಪಕ್ಷದ ಯಾರ ಬೆಂಬಲಕ್ಕೂ ನಿಂತಿಲ್ಲ : ಡಿ ಕೆ ಶಿವಕುಮಾರ್
ರಾಜ್ಯಸಭೆ ಚುನಾವಣೆಯಲ್ಲಿ ಯಾರ ಮಧ್ಯಸ್ಥಿಕೆ ಇಲ್ಲ, ಇಡೀ ಪಕ್ಷ ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ. ಖರ್ಗೆ ಸಾಹೇಬರು ಏನೂ ಮಾತಾಡಿಲ್ಲ. ಯಾರ ಬೆಂಬಲಕ್ಕೂ ನಿಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ತೀರ್ಮಾನವಾಗಿದೆ. ನಾನು, ಮಲ್ಲಿಕಾರ್ಜುನ ಖರ್ಗೆಯವರು, ಸಿದ್ದರಾಮಯ್ಯನವರು ಪಕ್ಷದ ಮುಖಂಡರೆಲ್ಲ ಕುಳಿತುಕೊಂಡು ಚರ್ಚೆ ಮಾಡಿ ಪಕ್ಷದ ಹಿತ ದೃಷ್ಟಿಯಿಂದ ನಾವು ನಾಮಪತ್ರ ಸಲ್ಲಿಕೆ ಮಾಡಿದ್ದೀವಿ ಎಂದರು. ನಮ್ಮತ್ರ ಯಾರೂ ಸಂಪರ್ಕ ಮಾಡಿಲ್ಲ. ನಾವು ಯಾರನ್ನೂ ಸಂಪರ್ಕ ಮಾಡಿಲ್ಲ. ನಾವು ಮಾತನಾಡೋದಕ್ಕೂ ಹೋಗಿಲ್ಲ. ನಮಗೆ ಅವಶ್ಯಕತೆ ಇಲ್ಲ. ಪಾಪ ಅವರು ಯಾರೂ ನಮ್ಮತ್ರ ಕೇಳಿಲ್ಲ ಎಂದರು.
ನಮ್ಮವರು ದೆಹಲಿಯಲ್ಲಿ ಏನು ಮಾತಾಡಿದ್ದರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ನಾವು ಚುನಾವಣೆಯನ್ನು ಮಾಡುತ್ತಿದ್ದೇವೆ. ಖರ್ಗೆ ಸಾಹೇಬರ ಮೇಲೆ ಅವರು- ಇವರು ಹೇಳಿದ್ರು ಅನ್ನೋದೆಲ್ಲ ಸುಳ್ಳು. ನಮ್ಮ ಪ್ರಕಾರ ಖರ್ಗೆ ಸಾಹೇಬರು ನಮ್ಮಲ್ಲಿ ಯಾವ ವಿಚಾರ ಕೂಡ ಮಾತಾಡಿಲ್ಲ. ಅವರು ದೆಹಲಿಗೆ ಹೋಗಿದ್ರು, ಮೀಟಿಂಗ್ ಇತ್ತು. ನಮಗೆ ಹೇಗೆ ಚಿಂತನ ಶಿಬಿರದ ಸಭೆ ಇತ್ತೋ ಹಾಗೆ ಅವರಿಗೆ ಪಕ್ಷದ ವಿಚಾರದಲ್ಲಿ ಸಭೆ ಇತ್ತು. ಒಂದು ದಿನ ದೆಹಲಿಗೆ ಹೋಗಿ ಬಂದರು. ಅದು ಬಿಟ್ಟರೆ ಇಡೀ ಪಕ್ಷ ಒಗ್ಗಟ್ಟಿನಿಂದ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದೇವೆ ಎಂದರು.
ನಮ್ಮ ಮತವನ್ನು ನಾವು ಕಾಪಾಡಿಕೊಳ್ಳುತ್ತೇವೆ. ಬೇರೆ ಪಕ್ಷದಲ್ಲೂ ನಮಗೆ ಆತ್ಮೀಯರಿದ್ದಾರೆ. ಆತ್ಮಸಾಕ್ಷಿ ಮತ ಎಲ್ಲರೂ ಕೊಡಬೇಕು ಎಂದು ನಾವು ಮತ್ತು ಅಭ್ಯರ್ಥಿ ಮನವಿ ಮಾಡಿಕೊಳ್ಳುತ್ತೇವೆ. ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳಿಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಗೆಲ್ತೀವೋ, ಸೋಲ್ತಿವೋ ಅನ್ನೋದಲ್ಲ. ನಮ್ಮ ರಾಜಕಾರಣ ನಾವು ಮಾಡುತ್ತಾ ಇದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.
ಓದಿ :ಪ್ರಶಾಂತ್ ಕೊಲೆ ಆದ ನಂತರ ಪೊಲೀಸ್ ಠಾಣೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ : ಹೆಚ್ ಡಿ ರೇವಣ್ಣ