ತುಮಕೂರು: ನಗರದ ಚಿಲುಮೆ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ ನೇತೃತ್ವದಲ್ಲಿ ಜಿಲ್ಲೆಯ ಹಿಂದುಳಿದ ಸಮುದಾಯದವರೊಂದಿಗೆ ಸಭೆ ನಡೆಸಲಾಯಿತು.
ಜಿಲ್ಲೆಯಲ್ಲಿ ಹಿಂದುಳಿದ ಸಮುದಾಯದವರ ಸಮಸ್ಯೆಗಳು ಹಾಗೂ ಗ್ರಾಮಗಳಲ್ಲಿ ಪೊಲೀಸರು ಕಾರ್ಯನಿರ್ವಹಿಸುವ ಬಗ್ಗೆ ಹಿಂದುಳಿದ ಸಮುದಾಯದವರೊಂದಿಗೆ ಸಭೆ ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.ಈ ಸಂದರ್ಭದಲ್ಲಿ ಎಸ್‌ಪಿ ಕೋನ ವಂಶಿ ಕೃಷ್ಣ ಅವರಿಗೆ ದಲಿತರ ಕಡೆಯಿಂದ ಸಮಸ್ಯೆಗಳ ಸುರಿಮಳೆಯೇ ಹರಿದು ಬಂದವು.
ಹಿಂದುಳಿದ ಸಮುದಾಯದ ಮುಖಂಡರೊಬ್ಬರು ಮಾತನಾಡಿ, ಶಿರಾ, ಪಾವಗಡ, ಮಧುಗಿರಿ ತಾಲೂಕುಗಳಲ್ಲಿ ಮದ್ಯವನ್ನು ರಾಜಾರೋಷವಾಗಿ ಎಲ್ಲಾ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸಿ. ಕೇವಲ ನಾವು ನೀವು ಕುಳಿತು ಮಾತನಾಡಿದರೆ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದರು.
ತಿಪಟೂರು ತಾಲೂಕಿನ ಹೊನ್ನಾವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರುವ ಗ್ರಾಮದಲ್ಲಿ ಕೇವಲ ಹಿಂದುಳಿದ ಹಾಗೂ ಲಿಂಗಾಯತ ಸಮುದಾಯದವರು ಮಾತ್ರ ವಾಸಿಸುತ್ತಿದ್ದು, ಎರಡು ಜಾತಿಯವರು ಸೇರಿ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಆದರೆ ಹಿಂದುಳಿದ ಸಮುದಾಯದವರು ದೇವಸ್ಥಾನ ಒಳ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಕೇವಲ ಹಿಂದುಳಿದ ಸಮುದಾಯದವರಿಗೆ ಮಾತ್ರ ಸಭೆ ಕರೆದು ಮಾತನಾಡುತ್ತಾರೆ. ಕೇವಲ ದಲಿತರಿಗೆ ಮಾತ್ರ ಸಂಧಾನ ಸಭೆ ಮಾಡಿದರೆ ಸಾಲದು ಮೇಲ್ವರ್ಗದವರನ್ನು ಕರೆಸಿ ಅವರ ಜೊತೆ ಸಭೆ ಮಾಡಬೇಕು ಎಂದರು.
ಅದೇ ರೀತಿ ಎಸ್ಸಿ-ಎಸ್ಟಿ ಕಾನೂನಿನಡಿ ಹೊಸದಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಹಿಂದುಳಿದ ಸಮುದಾಯದವರೊಂದಿಗೆ ಪೊಲೀಸರು ಸೌಜನ್ಯದಿಂದ ವರ್ತಿಸಬೇಕು, ಪೊಲೀಸರು ಇರುವುದು ಜನರ ಸೇವೆಗಾಗಿಯೇ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ ತಿಳಿಸಿದರು.