ತುಮಕೂರು: ಲಾಕ್ಡೌನ್ ಸಂದರ್ಭದಲ್ಲಿ 21 ದಿನಕ್ಕೆ ಆಗುವಂತೆ 2,25,628 ಶಾಲಾ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ವಿತರಿಸಲಾಗಿದೆ ಎಂದು ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಕಾರ್ಯಕ್ರಮದ ಯೋಜನಾಧಿಕಾರಿ ಬಿ.ಪಿ.ನಾಗರಾಜ್ ಮಾಹಿತಿ ನೀಡಿದರು.
ಸುಮಾರು 3,838 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗಿದೆ ಎಂದು ದಿಶಾ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದರು. 1 ರಿಂದ 5 ನೇ ತರಗತಿ ವರೆಗಿನ ಮಗುವಿಗೆ ದಿನಕ್ಕೆ 20 ಗ್ರಾಂ ತೊಗರಿಬೇಳೆ, 100 ಗ್ರಾಮ್ ಅಕ್ಕಿ, 5 ಗ್ರಾಂ ತಾಳೆ ಎಣ್ಣೆ ನೀಡಲಾಗುತ್ತಿದೆ. ಕೊರೊನಾ ವೇಳೆ ಆಹಾರ ಧಾನ್ಯಗಳನ್ನು ಪ್ರತಿ ಮಗುವಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಶೇ 90 ರಷ್ಟು ಪಡಿತರ ವಿತರಣೆ ಮಾಡಲಾಗಿದೆ. ಮೇ ತಿಂಗಳಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ್ ಭಾರತ್ ಯೋಜನೆಯಡಿ ವಲಸಿಗರಿಗೆ ಮತ್ತು ಪಡಿತರ ಚೀಟಿ ಹೊಂದಿಲ್ಲದ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.