ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ನಡುವಿನ ಆರೋಪ-ಪ್ರತ್ಯಾರೋಪ ಮುಗಿಲು ಮುಟ್ಟಿದ್ದು, ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್, ನೀರಾವರಿ ಯೋಜನೆಗೆ ಸಂಬಂಧಪಟ್ಟಂತೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ಭೌಗೋಳಿಕ ಅರಿವಿಲ್ಲ. ಅವರು ಪ್ರಾಥಮಿಕ ಶಾಲೆಯಲ್ಲಿ ಭೂಗೋಳ ಓದಿಲ್ಲ. ಹಾಗಾಗಿ ಅವರಿಗೆ ಎತ್ತಿನಹೊಳೆ ಪಾತ್ರದಲ್ಲೆ ನೇತ್ರಾವತಿ ಇದೆ ಎಂಬುದೇ ಗೊತ್ತಿಲ್ಲ ಎಂದು ಟೀಕಿಸಿದರು.
ಹಾಗಾಗಿ ನೇತ್ರಾವತಿ ನದಿ ತಿರುವು ಮಾಡಿಲ್ಲ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನೇತ್ರಾವತಿ ತಿರುವಿಗೆ ವಿರೋಧ ವ್ಯಕ್ತವಾದಾಗ ನೀರಾವರಿ ತಜ್ಞ ಪರಮಶಿವಯ್ಯ ಅದನ್ನು ಎತ್ತಿನಹೊಳೆ ಯೋಜನೆ ಎಂದು ಕರೆದಿದ್ದಾರೆ. ಹಾಸನದ ಕಣ್ಣೀರಿನ ನಾಯಕರಿಗೆ ಇದರ ಅರಿವಾಗಬೇಕು ಎಂದು ಪರೋಕ್ಷವಾಗಿ ದೇವೇಗೌಡರಿಗೆ ಕುಟುಕಿದರು.
ಇನ್ನು ಇದೇ ವೇಳೆ ಸಣ್ಣ ಕೈಗಾರಿಕೆ ಸಚಿವ ಎಸ್. ಆರ್. ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದ ಬಸವರಾಜ್, ಹೆಂಡ, ಸಾರಾಯಿ ಮಾರಾಟ ಮಾಡಿ ಜನರನ್ನು ಸಾಯಿಸುತ್ತಿದ್ದಾರೆ. ಇದರಿಂದ ಎಷ್ಟೋ ಜನ ಮಹಿಳೆಯರು ವಿಧವೆಯರಾಗಿದ್ದಾರೆ. ಗೋವಾದಿಂದ ಅಡಲ್ಟ್ರೇಟೆಡ್ ಸ್ಪಿರಿಟ್ ತಂದು ಶ್ರೀನಿವಾಸ್ ತಂದೆ ಮಾರಾಟ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದರು.