ತುಮಕೂರು: ನಿಧನವಾಗಿರೋ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಮಶಾನ ಇಲ್ಲದೇ ಇರುವುದರಿಂದ ಬೇಸತ್ತ ಗ್ರಾಮಸ್ಥರು ಶವವನ್ನ ರಸ್ತೆಯಲ್ಲಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಭಾನುವಾರ ಬೆಳಗ್ಗೆ ರೊಪ್ಪ ಗ್ರಾಮದ ರಂಗಪ್ಪ(54) ಎಂಬುವವರು ನಿಧರಾಗಿದ್ದರು.
ಅವರ ಅಂತ್ಯಕ್ರಿಯೆ ನಡೆಸಲು ಗ್ರಾಮದಲ್ಲಿ ಸ್ಮಶಾನವಾಗಲಿ, ರಂಗಪ್ಪ ಅವರ ಸ್ವಂತ ಸ್ಥಳವಾಗಲಿ ಇಲ್ಲದೇ ಕುಟುಂಬಸ್ಥರು ಪರದಾಡುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿ ಮೃತ ರಂಗಪ್ಪ ಅವರ ಶವವನ್ನ ರಸ್ತೆಯಲ್ಲಿಟ್ಟು ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಹಿಂದೂ-ಮುಸಲ್ಮಾನ್ ಸಮುದಾಯದ ನೂರಾರು ಮನೆಗಳಿರುವ ಈ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಸೂಕ್ತ ಸ್ಥಳ ಇಲ್ಲದೆ ಪ್ರತಿ ಭಾರಿಯೂ ಇದೇರೀತಿ ಗ್ರಾಮಸ್ಥರು ಪರದಾಡುತ್ತಾರಂತೆ, ಇದರಿಂದ ಬೇಸತ್ತಿರುವ ಗ್ರಾಮಸ್ಥರು, ಗ್ರಾಮ ಪಂಚಾಯ್ತಿ ಪಧಾಧಿಕಾರಿಗಳು ಗ್ರಾಮದಲ್ಲಿ ಮೃತರಾದವರ ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ರಸ್ತೆಯಲ್ಲಿ ಶವವಿಟ್ಟು ಧರಣಿ ನಡೆಸುವ ಮೂಲಕ ಒತ್ತಾಯಿಸಿದ್ದಾರೆ.
ನಿನ್ನೆಯಿಂದ ಶುರುವಾದ ಪ್ರತಿಭಟನೆ ಇಂದು ಕೂಡ ಮುಂದುವರೆದಿದೆ. ಶಾಸಕ ವೆಂಕಟರಮಣಪ್ಪ ಹಾಗೂ ತಹಶೀಲ್ದಾರ್ ವರದರಾಜು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಸ್ಮಶಾನಕ್ಕೆ ಜಾಗ ಹುಡುಕುವಲ್ಲಿ ನಿರತರಾಗಿದ್ದಾರೆ. ರೊಪ್ಪ ಗ್ರಾಮದ ಪಕ್ಕದ ಗ್ರಾಮ ಟಿ.ಎನ್ ಪೇಟೆಯಲ್ಲಿ ಸ್ಮಶಾನಕ್ಕೆ ಜಾಗ ಹುಡುಕಲಾಗಿದೆ. ಆದರೆ ಇದಕ್ಕೆ ಟಿ.ಎನ್ ಪೇಟೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರೊಪ್ಪದಲ್ಲೇ ಸ್ಮಶಾನಕ್ಕೆ ಅಧಿಕಾರಿಗಳು ಜಾಗ ಹುಡುಕಾಟ ನಡೆಸಿದ್ದಾರೆ.
ಈ ನಡುವೆ ರಾಜ್ಯದ ಬಹುತೇಕ ಕಡೆ ಇಂತಹುದೇ ಸಮಸ್ಯೆಗಳಿವೆ. ಇಂತಹ ವಿಚಾರಗಳು ಹೈಕೋರ್ಟ್ ಮೆಟ್ಟಿಲು ಸಹ ಏರಿವೆ. ಕೆಲವೆಡೆ ಸ್ಮಶಾನದ ಜಾಗ ಒತ್ತುವರಿ ಆದರೆ, ಮತ್ತೂ ಕೆಲವಡೆ ಸ್ಮಶಾನಕ್ಕೆ ಜಾಗವೇ ಇಲ್ಲ. ಹೀಗಾಗಿ ಆಗಾಗ್ಗೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದುದ್ದೂ ಉಂಟು. ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ಆರ್.ಟಿ ನಗರದ ಮಠದಹಳ್ಳಿ ಸ್ಮಶಾನದ ಸುತ್ತಮುತ್ತಲಿನ ಜಾಗ ಹಾಗೂ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಹೈ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತ್ತು.
ಬೆಂಗಳೂರಿನ ಆರ್.ಟಿ ನಗರದ ನಿವಾಸಿಗಳಾದ ಡಿ. ಚಂದ್ರ, ಎಲ್. ತಿಲಕ್ ಕುಮಾರ್ ಹಾಗೂ ಟಿ ಪ್ರಕಾಶ್ ರಾವ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಕೆಲ ಕಾಲ ವಾದ ಆಲಿಸಿದ ಪೀಠವು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತ್ತು.
ಒತ್ತುವರಿ ಆಗಿದೆ ಎನ್ನಲಾದ ಸ್ಮಶಾನ ಜಾಗಕ್ಕೆ ಭೇಟಿ ನೀಡಿ, ಪರಿಶೀಲಿಸುವಂತೆ ಬಿಬಿಎಂಪಿ ಆಯುಕ್ತರು ಓರ್ವ ಅಧಿಕಾರಿಯನ್ನು ನಿಯೋಜಿಸಬೇಕು. ಅಧಿಕಾರಿಯು ಸ್ಥಳ ಪರಿಶೀಲನೆ ನಡೆಸಿ, ಅರ್ಜಿದಾರರು ಆರೋಪಿಸಿರುವಂತೆ ಸ್ಮಶಾನ ಒತ್ತುವರಿಯಾಗಿದೆಯೇ ಎಂಬ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಹೇಳಿತ್ತು.
ಇದನ್ನೂ ಓದಿ : ತುಮಕೂರು : ಪೆಟ್ರೋಲ್ ಬಂಕ್ನ ಅಂಡರ್ ಟ್ಯಾಂಕ್ಗೆ ಇಳಿದ ಇಬ್ಬರು ಸಾವು