ತುಮಕೂರು: ಡಿಸಿಸಿ ಬ್ಯಾಂಕನ್ನು ಸೂಪರ್ ಸೀಡ್ ಮಾಡುವುದಕ್ಕೂ ಜಿಲ್ಲೆಯ ಉಪಮುಖ್ಯಮಂತ್ರಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಅಂಶಗಳನ್ನು ಆಧಾರದ ಮೇರೆಗೆ ಜಿಲ್ಲೆಯ ಡಿಸಿಸಿ ಬ್ಯಾಂಕನ್ನು ಸೂಪರ್ ಸೀಡ್ ಮಾಡಲಾಗಿದೆ. ನಿಜವಾದ ರೈತರಿಗೆ ಸಾಲ ನೀಡಿಲ್ಲ. ಸೂಚನೆ ಮೇರೆಗೆ ಮತ್ತು ಅವರ ಹಿಂಬಾಲಕರಿಗೆ ಸಾಲ ನೀಡಲಾಗುತ್ತಿದೆ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರಗಳನ್ನು ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಈಗಿನ ಡಿಸಿಸಿ ಬ್ಯಾಂಕ್ನ ಆಡಳಿತಾಧಿಕಾರಿ ಮನವಿ ಸಲ್ಲಿಸಲಾಗುವುದು ಎಂದರು.
ಕಳೆದ ತಿಂಗಳು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಮಗ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಅವಹೇಳನಕಾರಿಯಾಗಿ ಭಿತ್ತಿ ಪತ್ರಗಳನ್ನು ಅಂಟಿಸಿ, ನನ್ನ ಮೇಲೆಯೂ ಆರೋಪ ಹೊರಿಸಿದ್ದರು. ಈಗ ಅದು ಸುಳ್ಳು ಎಂಬುದು ಬಯಲಾಗಿದೆ. ಕೋತಿ ತಿಂದು ಮೇಕೆಯ ಮೂತಿಗೆ ವರೆಸಿದ ಹಾಗಾಗಿದೆ. ಅದೇ ರೀತಿ ಕೆ.ಎನ್.ರಾಜಣ್ಣ ಮಾಡಿದ್ದಾರೆ. ಹಾಗಾಗಿ ಆಡಳಿತಾಧಿಕಾರಿ ಕಾನೂನು ರೀತಿಯ ಪರಿಶೀಲನೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸಿದ್ಧಾರ್ಥ ಸಂಸ್ಥೆಯ ಕುರಿತು ಆರೋಪ ಮಾಡದೆ ದಾಖಲೆಗಳನ್ನು ಬಿಡುಗಡೆಗೊಳಿಸಿ ಕಾನೂನು ಮತ್ತು ಸರ್ಕಾರ ಕ್ರಮಕೈಗೊಳ್ಳಲಾಗಿದೆ. ಮೊದಲು ನಿಮ್ಮ ಮೇಲಿರುವ ಆರೋಪಗಳಿಂದ ಮುಕ್ತರಾಗಿ ಆನಂತರ ಬೇರೆಯವರ ಮೇಲೆ ಆರೋಪ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ರೇವಣಸಿದ್ದಯ್ಯ ಮಾತನಾಡಿ, ಡಿಸಿಸಿ ಬ್ಯಾಂಕ್ನಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ. ಬ್ಯಾಂಕ್ ತನ್ನ ಸ್ವಂತದ್ದು ಎಂಬ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಬ್ಯಾಂಕಿನ 11 ಅಧಿಕಾರಿಗಳನ್ನು ಮತ್ತು ನೌಕರರನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.