ತುಮಕೂರು: ಲೋಕಸಭೆ ಚುನಾವಣೆ ವೇಳೆ ಸಂಸದ ಮುದ್ದಹನುಮೇಗೌಡರು 3.5 ಕೋಟಿ ರೂ. ಹಣ ಪಡೆದಿದ್ದಾರೆ ಎಂಬ ಆಧಾರರಹಿತ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ಸೋಶಿಯಲ್ ಮೀಡಿಯಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದರ್ಶನ್ ಅವರನ್ನುಕರ್ತವ್ಯದಿಂದ ತೆಗೆದುಹಾಕಲಾಗಿದೆ.
ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಮಾಜಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ತುಮಕೂರು ಲೋಕಸಭೆ ಚುನಾವಣೆಯಲ್ಲಿ 3.5 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ದರ್ಶನ್ ಆರೋಪಿಸಿದ್ದರು. ಈ ರೀತಿ ಹೇಳಿರುವ ಮೊಬೈಲ್ ಸಂಭಾಷಣೆಯನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಕಾರ್ಯಕರ್ತ ದರ್ಶನ್ ಹರಿಬಿಟ್ಟಿದ್ದರು. ಹೀಗಾಗಿ ಈ ಆರೋಪದ ಮೇಲೆ ಅವರನ್ನು ಸೋಷಿಯಲ್ ಮೀಡಿಯಾದ ಎಲ್ಲಾ ಹುದ್ದೆಗಳಿಂದ ಕೆಪಿಸಿಸಿ ಸೋಷಿಯಲ್ ಮೀಡಿಯಾ ರಾಜ್ಯ ಉಸ್ತುವಾರಿ ಸಂದೀಪ್ ಅವರು ಅಮಾನತು ಮಾಡಿ ಕ್ರಮ ಜರುಗಿಸಿದ್ದಾರೆ.
ದರ್ಶನ್ ಸಾರ್ವಜನಿಕವಾಗಿ ತುಮಕೂರು ಜಿಲ್ಲಾ ಕಾಂಗ್ರೆಸ್ ಮುಖಂಡರ ಮೇಲೆ ಆಧಾರ ರಹಿತ ಆರೋಪಗಳು ಮತ್ತು ಬೇಕಾಬಿಟ್ಟಿ ಮಾತುಗಳನ್ನಾಡಿ, ಪಕ್ಷದ ಹೆಸರಿಗೆ ಧಕ್ಕೆ ತಂದಿದ್ದಾರೆ. ಅಲ್ಲದೆೇ ಮಾಧ್ಯಮಗಳಲ್ಲಿ ವಿಷಯ ಪ್ರಸ್ತಾಪಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಯೂತ್ ಕಾಂಗ್ರೆಸ್ ಸಂಘಟನೆಗೆ ನೋವುಂಟು ಮಾಡಿದೆ ಎಂದಿದ್ದಾರೆ. ಹೀಗಾಗಿ ನಿಮ್ಮನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಎಲ್ಲಾ ಸ್ಥಾನಗಳಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಸಂದೀಪ್ ವಿವರಣೆ ನೀಡಿದ್ದಾರೆ.