ತುಮಕೂರು: ಜಿಲ್ಲೆಯಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎರಡು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ.
ಲೋನ್ ಕೊಡುವುದಾಗಿ ಹೇಳಿ ಅಪರಿಚಿತರೊಬ್ಬರು ಮಹಿಳೆಯೊಬ್ಬರಿಗೆ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಕಳುಹಿಸಿ 76,500 ರೂ. ವಂಚಿಸಿದ್ದಾರೆ. ಹೌದು, ತುಮಕೂರಿನ ಸಪ್ತಗಿರಿ ಬಡಾವಣೆ ನಿವಾಸಿ ಚೈತ್ರ ಎಂಬುವವರೇ ವಂಚನೆಗೆ ಒಳಗಾಗಿರುವವರು.
ಮೇ. 28ರಂದು ಅಪರಿಚಿತ ವ್ಯಕ್ತಿಯೊಬ್ಬರು ಚೈತ್ರ ಅವರ ವಾಟ್ಸ್ಆ್ಯಪ್ ನಂಬರ್ಗೆ ಲೋನ್ ಕೊಡುವುದಾಗಿ ಮೆಸೇಜ್ ಮಾಡಿದ್ದರು. ಲೋನ್ ಪ್ರೊಸೆಸಿಂಗ್ ಶುಲ್ಕ ಕಟ್ಟಬೇಕು ಎಂದು ಹೇಳಿ ಚೈತ್ರ ಅವರಿಗೆ ಅಪರಿಚಿತ ವ್ಯಕ್ತಿಯ ಎಸ್ಬಿಐ ಖಾತೆಗೆ ಹಣ 17,500 ರೂ. ಹಣ ವರ್ಗಾಯಿಸಲು ತಿಳಿಸಲಾಗಿತ್ತು. ಅದರಂತೆ ಹಂತ ಹಂತವಾಗಿ ಚೈತ್ರ ಅವರು ಒಟ್ಟು 76,500 ರೂ.ಗಳನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾಯಿಸಿದ್ದಾರೆ. ನಂತರ ಆ ಅಪರಿಚಿತ ವ್ಯಕ್ತಿ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಮೊಸಕ್ಕೆ ಒಳಗಾದ ಚೈತ್ರ ಸಿಇಎನ್ ಪೊಲೀಸ್ ಠಾಣೆಗೆ ಜೂ. 10ರಂದು ದೂರು ನೀಡಿದ್ದಾರೆ.
ಇದನ್ನು ಓದಿ: ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ವಿದ್ಯಾರ್ಥಿನಿ
ಮತ್ತೊಂದು ಪ್ರಕರಣದಲ್ಲಿ ತುಮಕೂರು ತಾಲೂಕಿನ ಹೊಸಹಳ್ಳಿ ಶಿವಕುಮಾರ್ ಎಂಬುವವರು ಏರ್ಟೆಲ್ ರಿಚಾರ್ಜ್ ಮಾಡುವ ವೇಳೆ ತಪ್ಪು ಐಡಿ ನಂಬರ್ಗೆ 1,111 ರೂ.ಗಳ ರಿಚಾರ್ಜ್ ಮಾಡಿದ್ದರು. ಇದನ್ನು ಸರಿಪಡಿಸಲು ಗೂಗಲ್ ಮೂಲಕ ಫೋನ್ ಪೇ ಕಸ್ಟಮರ್ ಕೇರ್ಗೆ ಕರೆ ಮಾಡಿದ್ದಾರೆ. ಜೂ. 9ರಂದು ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ, ಕರೆ ಕಡಿತಗೊಳಿಸಿ ನಂತರ ಮೊಬೈಲ್ ನಂಬರ್ನಿಂದ ಶಿವಕುಮಾರ್ ನಂಬರ್ಗೆ ಕರೆ ಮಾಡಿದ್ದಾನೆ.
ಹಣ ಮರುಪಾವತಿಸುವುದಾಗಿ ಹೇಳಿ, ‘ಫೋನ್ ಪೇ’ ಮಾಡಿಸಿ ಕೆಲವು ಕೋಡ್ ನಂಬರ್ಗಳನ್ನು ಕಳುಹಿಸಿ ಅವರಿಗೆ ಅರಿವಿಗೆ ಬಾರದಂತೆ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು 42,454 ರೂ.ಗಳನ್ನು ಅಪರಿಚಿತ ವ್ಯಕ್ತಿಯು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಹೀಗಾಗಿ ತಾನು ವಂಚನೆಗೆ ಒಳಗಾಗಿದ್ದು, ಹಣ ವಾಪಸ್ ಕೊಡಿಸುವಂತೆ ಸಿಇಎನ್ ಪೊಲೀಸ್ ಠಾಣೆಗೆ ಶಿವಕುಮಾರ್ ದೂರು ನೀಡಿದ್ದಾರೆ.