ತುಮಕೂರು: ಕ್ಷುಲ್ಲಕ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಪಾವಗಡದ ಕ್ಯಾಂಟೀನ್ ಎದುರು ನಡೆದಿದೆ. ಕ್ಯಾಂಟೀನ್ ಮುಂಭಾಗದಲ್ಲಿ ವಾಹನ ನಿಲುಗಡೆ ಮಾಡಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ನಾಗರಾಜ್ ಮತ್ತು ಮಂಜು ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಯುವಕರ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮೇಲೆ ಹಲ್ಲೆ: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹಾಲಿನ ಡೈರಿಯಲ್ಲಿ ಪಶು ಆಹಾರ ಉತ್ಪನ್ನವನ್ನು ನೀಡಲು ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿ ಶೆಟ್ಟಿಕೆರೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವಕುಮಾರ್ ಮೇಲೆ ಹಲ್ಲೆ ನಡೆದಿದೆ.
ಕ್ಷುಲ್ಲಕ ವಿಚಾರಕ್ಕೆ ಕರ್ತವ್ಯ ನಿರತ ಶಿವಕುಮಾರ್ ಮೇಲೆ ನಾಗರಾಜು, ಯೋಗಾನಂದ್, ಅನಿಲ್ ಎಂಬವರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಕೇಳಿದ ತಕ್ಷಣ ಬೂಸಾ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಬೂಸಾ ಗೋದಾಮಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಮೂವರ ವಿರುದ್ಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ವ್ಯಕ್ತಿ ಮೇಲೆ ಮಾರಕ ಹಲ್ಲೆ ಕೇಸ್: ಆರೋಪಿಗಳ ಪತ್ತೆಗಾಗಿ ಪೊಲೀಸರ ತಲಾಶ್
ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಸವಾರನಿಂದ ಹಲ್ಲೆ: ಎರಡು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಸವಾರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿತ್ತು. ನನ್ನ ಡ್ಯೂಟಿ ಮುಗಿಯಿತು, ಬೇರೆಯವರು ಪೆಟ್ರೋಲ್ ಹಾಕ್ತಾರೆ ಎಂದು ಸಿಬ್ಬಂದಿ ಹೇಳಿದ್ದಕ್ಕೆ ಕೋಪಗೊಂಡ ಸವಾರ, ಬಂಕ್ ಮ್ಯಾನೇಜರ್ ಸೇರಿ ನಾಲ್ವರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ನಯಾರ ಪೆಟ್ರೋಲ್ ಬಂಕ್‌ನಲ್ಲಿ ನಡೆದಿತ್ತು.
ಮಧು ಹುರುಡಿ ಹಲ್ಲೆ ಮಾಡಿದ್ದಾರೆ ಎಂದು ಬಂಕ್ ಸಿಬ್ಬಂದಿ ಆರೋಪಿಸಿದ್ದು, ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರಿಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಮಧು ಆಗಮಿಸಿದ್ದರು. ಆಗ ಸಿಬ್ಬಂದಿಯೊಬ್ಬರು, ನನ್ನ ಡ್ಯೂಟಿ ಮುಗಿಯಿತು ಬೇರೆಯವರು ಪೆಟ್ರೋಲ್ ಹಾಕ್ತಾರೆ ಎಂದಿದ್ದಾರೆ. ಇದರಿಂದ ಕೋಪಗೊಂಡು ಹಲ್ಲೆ ಮಾಡಿದ್ದಾರೆ ಎಂದು ಬಂಕ್ ಮ್ಯಾನೇಜರ್ ಆರೋಪಿಸಿದ್ದರು. ಬಳಿಕ ಗಾಯಾಳು ಸಿಬ್ಬಂದಿಯನ್ನು ಮೂಡಿಗೆರೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರು: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ಐವರು ಸೆರೆ