ತುಮಕೂರು: ಪಾಲಿಕೆಯ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಶವಗಳ ಅಂತ್ಯ ಸಂಸ್ಕಾರ ಮಾಡಲು ಇದ್ದಂತಹ ವಿದ್ಯುತ್ ಚಿತಾಗಾರ ಕೆಟ್ಟು ನಿಂತಿದೆ. ಶವಗಳ ಅಂತ್ಯ ಸಂಸ್ಕಾರ ಮಾಡಲು ಹೆಚ್ಚಿನ ಒತ್ತಡದ ಹಿನ್ನೆಲೆಯಲ್ಲಿ ವಿದ್ಯುತ್ ಚಿತಾಗಾರ ದುರಸ್ತಿಗೆ ಬಂದಿದೆ. ಹೀಗಾಗಿ ಮತ್ತೊಂದು ಚಿತಾಗಾರ ತೆರೆಯಲು ಪಾಲಿಕೆ ಚಿಂತನೆ ನಡೆಸಿದೆ.
ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ ಮೃತಪಟ್ಟವರ 80 ಶವಗಳನ್ನು ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಒಂದು ಶವ ಸುಟ್ಟ ನಂತರ ಕನಿಷ್ಠ ಎರಡು ಗಂಟೆ ಅವಧಿಯ ಅಂತರ ಇರಬೇಕು. ಈ ನಿಯಮವನ್ನು ಪಾಲನೆ ಮಾಡಬೇಕಿದೆ. ಆದರೆ ಶವಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸಾಕಷ್ಟು ಗೊಂದಲ ನಿರ್ಮಾಣವಾಗಿದೆ. ಇನ್ನೊಂದೆಡೆ ಈ ವಿದ್ಯುತ್ ಚಿತಾಗಾರದ ಮೇಲೆ ಹೆಚ್ಚಿನ ಒತ್ತಡ ಬಂದ ಹಿನ್ನೆಲೆಯಲ್ಲಿ ಪ್ರಸ್ತುತ ದುರಸ್ತಿಗೆ ಒಳಪಟ್ಟಿದೆ. ಬದಲಾಗಿ ಶವಗಳನ್ನು ಸೌದೆ ಬಳಸಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಆದ್ರೆ ಸುತ್ತಮುತ್ತಲ ಜನವಸತಿ ಪ್ರದೇಶಗಳಲ್ಲಿ ಇದ್ರಿಂದ ವಿಪರೀತ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಮನಗಂಡ ಪಾಲಿಕೆಯು ಮತ್ತೊಂದು ವಿದ್ಯುತ್ ಚಿತಾಗಾರ ಆರಂಭಿಸಲು ನಿರ್ಧರಿಸಿದೆ.
ತುಮಕೂರು ನಗರ ವ್ಯಾಪ್ತಿಯಲ್ಲಿ 1338 ಸೋಂಕಿತ ಪ್ರಕರಣಗಳು ಸಕ್ರಿಯವಾಗಿವೆ. ತುಮಕೂರು ಕೋವಿಡ್-19 ಆಸ್ಪತ್ರೆಯಲ್ಲಿ ಸಾವನ್ನಪ್ಪುವವರ ಅಂತ್ಯ ಸಂಸ್ಕಾರ ತುಮಕೂರು ನಗರದಲ್ಲಿಯೇ ನಡೆಯುತ್ತದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಅಂತ್ಯ ಸಂಸ್ಕಾರ ಮಾಡಲು ಕಾಯಬಾರದು. ಅಲ್ಲದೆ ಇದಕ್ಕೆ ಪರಿಹಾರವಾಗಿ ಪ್ರತ್ಯೇಕ ವಿದ್ಯುತ್ ಚಿತಾಗಾರದ ಅವಶ್ಯಕತೆ ಇದೆ ಎಂಬ ನಿರ್ಧಾರಕ್ಕೆ ಬರಲಾಗುತ್ತಿದೆ. ಶೀಘ್ರದಲ್ಲೇ ಅದನ್ನು ಜಾರಿಗೆ ತರಲಾಗುವುದು ಎನ್ನುತ್ತಾರೆ ಪಾಲಿಕೆಯ ಮೇಯರ್ ಫರೀದಾ ಬೇಗಂ.