ತುಮಕೂರು: ಜಿಲ್ಲೆಯಲ್ಲಿ ಅದರಲ್ಲಿಯೂ ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.
ತುಮಕೂರು ಮತ್ತು ಶಿರಾ ತಾಲೂಕಿನಲ್ಲಿ ಕೊರೊನಾ ಸೋಂಕಿತರು ವ್ಯಾಪಕವಾಗಿ ಪತ್ತೆಯಾಗುತ್ತಿದ್ದು, ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಕೆಲಸ ಅರಸಿ ಸುಮಾರು 50 ಸಾವಿರ ಮಂದಿ ಪ್ರಯಾಣ ಬೆಳೆಸುತ್ತಾರೆ. ಇದರಿಂದಾಗಿ ತುಮಕೂರು ನಗರದಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನಲಾಗ್ತಿದೆ.
ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಬರೋಬ್ಬರಿ 1 ಸಾವಿರ ಮಂದಿಗೆ ಸೋಂಕು ತಗುಲಿದೆ. ಮಾ. 26 ರಂದು 106 ಮಂದಿ ಸೋಂಕಿತರು, ಮಾ. ರಂದು 79 ಮಂದಿ, ಮಾ.28 - 64, ಮಾ.29 - 62, ಮಾ.30 - 45, ಮಾ.31 - 156, ಏ.-01 -99, ಏ.02 -164, ಏ.03 -159, ಏ.04 - 136 ಮಂದಿ ಸೇರಿ ಒಟ್ಟು– 1070 ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ.
ಇನ್ನೊಂದೆಡೆ, ಸೋಂಕು ತಡೆಗಟ್ಟಲು ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಅನುಷ್ಟಾನಕ್ಕೆ ತಂದ್ರೂ ನಿಯಂತ್ರಣಕ್ಕೆ ಸಾಧ್ಯವಾಗುತ್ತಿಲ್ಲ. ಶಿರಾ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅಲ್ಲದೇ ಕೆಲ ಹಾಸ್ಟೆಲ್ ಮತ್ತು ಶಾಲೆಗಳ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಟಾಸ್ಕ್ ಪೋರ್ಸ್ ಸಭೆಯನ್ನು ಮಾಡಲಾಗಿದ್ದು, ಶನಿವಾರದಿಂದ ಸೋಂಕಿತರನ್ನು ಪತ್ತೆ ಹಚ್ಚುವ ಪರೀಕ್ಷೆಯ ಗುರಿಯನ್ನು ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ನಿಲ್ಲದ ಕೋವಿಡ್ ಅಟ್ಟಹಾಸ: 24 ಗಂಟೆಗಳಲ್ಲಿ 96 ಸಾವಿರ ಪ್ರಕರಣ ಪತ್ತೆ