ತುಮಕೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ವೈಮನಸ್ಸು ಇದ್ದರೂ ಎಲ್ಲವನ್ನೂ ಬದಿಗಿರಿಸಿ ಮುಂಬರುವ ಜಿಪಂ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರವನ್ನು ಹಿಡಿಯಲಿದ್ದೇವೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎಲ್ಲ ಕ್ಷೇತ್ರದಲ್ಲಿಯೂ ವಿಫಲವಾಗಿದೆ. ಒಂದೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಕನಿಷ್ಠ ಮಾಸಾಶನ ನೀಡಲು ಸಾಧ್ಯವಾಗುತ್ತಿಲ್ಲ. ಕೇವಲ ಬೋಗಸ್ ಮಾತುಗಳನ್ನು ಹೇಳಲಾಗುತ್ತಿದೆ ಎಂದು ಟೀಕಿಸಿದರು.
ರಾಜ್ಯಕ್ಕೆ ಇರುವಂತಹ ನೀರಾವರಿ ಯೋಜನೆಗಳ ಮೇಲಿನ ಹಕ್ಕನ್ನು ನೆರೆ ರಾಜ್ಯಕ್ಕೆ ನೀಡಲು ತಲೆಬಾಗುವ ನಡೆ ಕಂಡು ಬರುತ್ತಿದೆ. ಮೇಕೆದಾಟು ಯೋಜನೆ ಕಾಮಗಾರಿಯ ಆರಂಭಿಸಬೇಕು ಎಂದು ಎಂಟು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಕೇಂದ್ರ ಸರ್ಕಾರ ಹಾಗೂ ಕೇಂದ್ರೀಯ ನೀರಾವರಿ ನಿಗಮಕ್ಕೆ ಯೋಜನೆಗಳ ಮಾಹಿತಿಯನ್ನು ಕಳುಹಿಸಲಾಗಿತ್ತು. ತಮಿಳುನಾಡು ಸರ್ಕಾರಕ್ಕೆ ಮನವಿಯನ್ನು ಮಾಡಲಾಗಿತ್ತು. ಇಷ್ಟಾದರೂ ಮೇಕೆದಾಟು ಅನ್ನು ಕಟ್ಟುವ ಪ್ರಯತ್ನವನ್ನು ಕೂಡ ಮಾಡಲಿಲ್ಲ. ರಾಜ್ಯದಲ್ಲಿರುವ 25 ಮಂದಿ ಬಿಜೆಪಿ ಸಂಸದರು ಒಮ್ಮೆಯೂ ಕೂಡ ಪ್ರಧಾನಿ ಬಳಿ ಹೋಗಿ ಈ ಕುರಿತು ಚರ್ಚಿಸಲಿಲ್ಲ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬರುವುದರಿಂದ ಹೇಮಾವತಿ ನದಿ ನೀರನ್ನು ತುಮಕೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಗೆ ಸಮರ್ಥವಾಗಿ ಬಳಸಿಕೊಳ್ಳಬಹುದಾಗಿದೆ. ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ನೀರಾವರಿ ಯೋಜನೆಗಳ ಹಕ್ಕನ್ನು ಸುಲಭವಾಗಿ ತಮಿಳುನಾಡು ಕಸಿಯುವ ಪ್ರಯತ್ನ ನಡೆಸಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ಯಾಕೆ ಈ ರೀತಿಯಾದ ಒಂದು ನಡೆಯನ್ನು ಮುಂದುವರಿಸಿದ ಎಂಬುದು ಅರ್ಥವಾಗುತ್ತಿಲ್ಲ. ಅಕಸ್ಮಾತ್ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ನೀರಿನ ಹಕ್ಕನ್ನು ತಮಿಳುನಾಡು ಸರ್ಕಾರ ಕಸಿಯುವ ಪ್ರಯತ್ನ ಮಾಡಿದರೆ ಅದಕ್ಕೆ ರಾಜ್ಯದ ಬಿಜೆಪಿ ಸರ್ಕಾರವೇ ಹೊಣೆಯಾಗುತ್ತದೆ ಎಂದು ತಿಳಿಸಿದರು.