ತುಮಕೂರು: ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಔಷಧಿ, ಸ್ಯಾನಿಟೈಸರ್, ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್‌ಗಳನ್ನು ಖರೀದಿ ಮಾಡುವಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಹಾಗಾಗಿ ಭ್ರಷ್ಟಾಚಾರ ಮಾಡಿದ ಸಚಿವರು, ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಿಂದ ಭ್ರಷ್ಟ ಸಚಿವರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಶಿವಶಂಕರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಕಾಯಿಲೆಯನ್ನು ನಿಯಂತ್ರಣ ಮಾಡುತ್ತೇವೆ ಎಂಬ ನೆಪ ಹೇಳಿ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡಿದೆ. ಅದರಲ್ಲಿ ಸರ್ಕಾರ ಅರ್ಧದಷ್ಟು ಪ್ರಮಾಣದ ಹಣವನ್ನು ಮಧ್ಯವರ್ತಿಗಳ ಪಾಲಾಗುವಂತೆ ಮಾಡಿದೆ ಹಾಗೂ ಭ್ರಷ್ಟಾಚಾರ ಮಾಡಿ ಕೊರೊನಾ ತಡೆಯುವಲ್ಲಿ ವಿಫಲವಾಗಿದೆ. ಹಾಗಾಗಿ ಇದರ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಲು ಎಲ್ಲಾ ಭಾಗದಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದಂತೆ, ದೇಶದ ಜನ ಎಲ್ಲಾ ಕ್ರಮಗಳನ್ನು ಅನುಸರಿಸಿದ್ದಾರೆ. ಪ್ರಧಾನಿ ಅವರು ಭಾವನಾತ್ಮಕ ವಿಚಾರಗಳಲ್ಲಿ ಹೆಚ್ಚು ಒತ್ತು ನೀಡುತ್ತಿದ್ದಾರೆಯೇ ಹೊರತು, ವೈಜ್ಞಾನಿಕವಾಗಿ ಕೊರೊನಾ ತಡೆಯುವ ನಿಟ್ಟಿನಲ್ಲಿ ಯೋಚನೆ ಮಾಡಲಿಲ್ಲ ಎಂದರು.
ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಔಷಧಿ, ಸ್ಯಾನಿಟೈಸರ್, ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್‌ಗಳನ್ನು ಖರೀದಿ ಮಾಡುವಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಹಾಗಾಗಿ ಭ್ರಷ್ಟಾಚಾರ ಮಾಡಿದ ಸಚಿವರು, ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಭಾರತ ದೇಶದಲ್ಲಿ ಸುಮಾರು ಎರಡೂವರೆ ತಿಂಗಳುಗಳ ಕಾಲ ಲಾಕ್ ಡೌನ್ ಆಗಿತ್ತು, ಆ ಸಮಯದಲ್ಲಿ ಕೊರೊನಾ ತಡೆಯಲು ಸರ್ಕಾರ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕಿತ್ತು? ಆ ಕ್ರಮಗಳನ್ನು ಕೈಗೊಂಡಿದೆಯೇ ಎಂಬುದು ನನ್ನ ಪ್ರಶ್ನೆ. ಲಾಕ್ ಡೌನ್ ಸಮಯದಲ್ಲಿ ಕೊರೊನಾ ಜೊತೆಗೆ ಇತರೆ ಕಾಯಿಲೆಗೆ ಒಳಗಾಗಿರುವ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಮಾರ್ಚ್ ತಿಂಗಳಲ್ಲಿಯೇ ನಮ್ಮ ರಾಜ್ಯದಲ್ಲಿ ಕೊರೊನಾದಿಂದಾಗಿ ಮೊದಲ ಸಾವು ಸಂಭವಿಸಿತ್ತು. ಮಾರ್ಚ್ನಿಂದ ಜುಲೈ ತಿಂಗಳವರೆಗೆ ಸಮಯ ಬೇಕಿತ್ತೇ? ರ್ಯಾಪಿಡ್ ಆಂಟಜನ್ ಟೆಸ್ಟ್ ಕಿಟ್ ಖರೀದಿ ಮಾಡಲು ಯಾವ ಕಂಪನಿ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಕಮಿಷನ್ ನೀಡುತ್ತದೆಯೋ ಆ ಕಂಪನಿಯಿಂದ ಖರೀದಿಸಲು ಇಷ್ಟು ದಿನಗಳ ಕಾಲ ಕಾದಿದ್ದೀರಾ ಎಂದು ಪ್ರಶ್ನಿಸಿದರು.