ತುಮಕೂರು: ನಗರದ ವಿದ್ಯಾನಗರ ಬಡಾವಣೆಯಲ್ಲಿ ಪಾಲಿಕೆಯಿಂದ ಮಕ್ಕಳ ಉದ್ಯಾನವನಕ್ಕೆಂದು ಸ್ಥಳ ಮೀಸಲಿರಿಸಿದೆ. ಅದೇ ಉದ್ಯಾನದೊಳಗಡೆ ಹೈಟೆನ್ಷನ್ ಎಲೆಕ್ಟ್ರಿಕ್ ಕೇಬಲ್ಗಳು ಹಾದುಹೋಗಿದ್ದು ಅಪಾಯವನ್ನು ಕೈಬೀಸಿ ಕರೆಯುತ್ತಿದೆ.
ನಗರದ ವಿದ್ಯಾನಗರ ಬಡಾವಣೆ, ಕುವೆಂಪು ನಗರ ಬಡಾವಣೆ ಮೂಲಕ ಹಾದುಹೋಗಿರುವ ಇಂತಹ ಕೇಬಲ್ಗಳ ಕೆಳ ಭಾಗದಲ್ಲಿ ಮಕ್ಕಳ ಉದ್ಯಾನವನ ಸೇರಿ ಅನೇಕ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿರುವುದು ಕಾಣಬಹುದು.
ವಿದ್ಯಾನಗರ ಬಡಾವಣೆಯಲ್ಲಿ ಮಕ್ಕಳ ಉದ್ಯಾನವನಕ್ಕೆ ಮೀಸಲಿಟ್ಟು ಮಹಾನಗರ ಪಾಲಿಕೆಯಿಂದ ಬೋರ್ಡನ್ನು ಕೂಡ ಅಳವಡಿಸಲಾಗಿದೆ. ನಿತ್ಯ ಮಕ್ಕಳು ಹೈಟೆನ್ಷನ್ ಎಲೆಕ್ಟ್ರಿಕ್ ಟೇಬಲ್ ಆಗಿರುವಂತಹ ವಿದ್ಯುತ್ ಕಂಬಗಳ ಬಳಿಯೇ ಆಟವಾಡುತ್ತಿರುತ್ತಾರೆ. ಅಲ್ಲದೇ ವಿದ್ಯುತ್ ಕಂಬಗಳಿಗೆ ಅಪಾಯಕಾರಿ ಎಂಬ ಬೋರ್ಡನ್ನು ಕೂಡ ನೇತು ಹಾಕಲಾಗಿದೆ. ಹೀಗಿದ್ದರೂ ಈ ಸ್ಥಳದಲ್ಲಿ ಮಹಾನಗರ ಪಾಲಿಕೆಯು ಮಕ್ಕಳ ಉದ್ಯಾನವನ ಎಂದು ಘೋಷಿಸಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇನ್ಮುಂದಾದರೂ ತುಮಕೂರು ಮಹಾನಗರ ಪಾಲಿಕೆ ಈ ಕುರಿತು ಗಂಭೀರವಾಗಿ ಪರಿಶೀಲಿಸಿ ವಿದ್ಯುತ್ ಕಂಬ ಇರುವ ಸುತ್ತಲೂ ಉದ್ಯಾನವನ ಎಂದು ಪರಿಗಣಿಸಿರುವುದನ್ನು ಪರಿಶೀಲಿಸಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.