ತುಮಕೂರು: ಆರು ಮಂದಿಗೆ ಕೋವಿಡ್ ಸೋಂಕು ಹರಡಲು ಕಾರಣನಾದ 5813 ನೇ ಸಂಖ್ಯೆಯ ಸೋಂಕಿತನ ವಿರುದ್ಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಶಿರಾ ನಗರದ ಪಾರ್ಕ್ ಮೊಹಲ್ಲಾದಲ್ಲಿ ಪಾತ್ರೆ ಅಂಗಡಿ ಇಟ್ಟುಕೊಂಡಿರುವ ಸೋಂಕಿತ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ತನ್ನ ಹೆಂಡತಿ ಮಕ್ಕಳೊಂದಿಗೆ ಆಂಧ್ರಪ್ರದೇಶದ ಹಿಂದೂಪುರಕ್ಕೆ ಹೋಗಿ ಬಂದಿದ್ದಾನೆ. ಈ ವಿಚಾರವನ್ನು ಮರೆ ಮಾಚಿದ್ದಲ್ಲದೆ ಶಿರಾ ನಗರದಲ್ಲಿರುವ ತನ್ನ ಕುಟುಂಬದ ಆರು ಮಂದಿಗೆ ಕೊರೊನಾ ಸೋಂಕು ಹರಡಿ ಜನರ ಆರೋಗ್ಯ ಸುರಕ್ಷತೆಗೆ ಅಪಾಯ ಉಂಟುಮಾಡಲು ಕಾರಣನಾಗಿದ್ದಾನೆ. ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಐಪಿಸಿ ಕಲಂ 188, 269, 271 ಮತ್ತು ಕಲಂ 03 ಎಪಿಡಮಿಕ್ ಡಿಸೀಸ್ ಆ್ಯಕ್ಟ್ 1897 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸೋಂಕಿತ ವ್ಯಕ್ತಿಯು ಮೇ 5 ರಂದು ಶಿರಾ ನಗರದ ನಾಯಕನಹಟ್ಟಿ ವೃತ್ತದಿಂದ ಸರ್ಕಾರಿ ನಿಯಮದಂತೆ ಸೇವಾ ಸಿಂಧು ಆ್ಯಪ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳದೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ಪಟ್ಟಣದ ಮುಕಡಿ ಪೇಟೆಗೆ ಬೈಕ್ ನಲ್ಲಿ ತೆರಳಿದ್ದನು. ತನ್ನ ಮಾವನ ಮನೆಯಿಂದ ಹೆಂಡತಿ ಮತ್ತು ಮಕ್ಕಳೊಂದಿಗೆ ಬೈಕ್ ನಲ್ಲಿ ವಾಪಸ್ ಜೂನ್ 2 ರಂದು ಮಧ್ಯಾಹ್ನ ಶಿರಾ ನಗರಕ್ಕೆ ಬಂದಿದ್ದರು.
ಜೂನ್ 6 ರಂದು ಕೊರೊನಾ ಗುಣಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿರಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೂನ್ 8 ರಂದು ಪರೀಕ್ಷೆಯ ವರದಿ ಬಂದಿದ್ದು, ಸೋಂಕು ಇರುವುದು ದೃಢವಾಗಿತ್ತು.
ಈಗಾಗಲೇ ಶಿರಾ ನಗರದ ಬೇಗಂ ಮೊಹಲ್ಲಾ (ಗೌಳಿಗರ ಕಟ್ಟೆ)ಯನ್ನು ಕಂಟೈನ್ ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.