ತುಮಕೂರು: ಕೇಂದ್ರ ಸರ್ಕಾರದ ಪೌರತ್ವ (ತಿದ್ದುಪಡಿ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ನಗರದ ಟೌನ್ಹಾಲ್ ವೃತ್ತದ ಬಳಿ ವಕೀಲರು ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ರಮೇಶ್ ನಾಯಕ್, ಪೌರತ್ವ ಕಾಯ್ದೆಯನ್ನು ವಿರೋಧಿಸಿ ಈಗಾಗಲೇ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಕೇವಲ ಮುಸ್ಲಿಂ ಸಮುದಾಯ ಮಾತ್ರ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ಅಪಪ್ರಚಾರ ಮಾಡುವ ಮೂಲಕ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದರು.
ಚುನಾಯಿತ ಸರ್ಕಾರ ಕಾನೂನನ್ನು ರೂಪಿಸಬೇಕಾದರೆ ಒಂದು ಜಾತಿ, ಧರ್ಮದ ನಡುವೆ ತಾರತಮ್ಯ ಉಂಟಾಗುವಂತೆ ರೂಪಿಸಬಾರದು. ಜಗತ್ತಿಗೆ ವಿಶ್ವಮಾನವತೆ ಸಂದೇಶ ಸಾರಿದ ಕುವೆಂಪು ಅವರ ಜನ್ಮದಿನ ಇಂದು, ಹಾಗಾಗಿಯ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಮೊದಲು ನೀವು ವಿಶ್ವಮಾನವರಾಗಬೇಕು. ಕಾಯಿದೆ ,ಕಾನೂನುಗಳನ್ನು ಮಾಡುವುದು ಸರ್ಕಾರವಲ್ಲ, ಸಂವಿಧಾನ. ನಿಮಗೆ ಸಾಧ್ಯವಾದರೆ ಸಂವಿಧಾನದಲ್ಲಿರುವ ಜಾತ್ಯತೀತತೆ ಎಂಬ ಪದವನ್ನು ತೆಗೆದುಹಾಕಿ. ಆನಂತರ ಈ ಕಾಯ್ದೆಯನ್ನು ರೂಪಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.