ಕಾರವಾರ: ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ಬೆಳಕಿಗೆ ತರುವ ದೀಪಾವಳಿ ಹಬ್ಬ ಹಿಂದೂಗಳ ಪಾಲಿಗೆ ದೊಡ್ಡ ಹಬ್ಬ. ಅದರಲ್ಲಿಯೂ ರೈತರ ಒಡನಾಡಿ ಗೋವುಗಳಿಗೆ ಪೂಜೆ ಸಲ್ಲಿಸಲು ಸಿಗುವ ಹಬ್ಬವನ್ನು ರೈತರು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ವ್ಯಾಪ್ತಿಯ ಉಡಳ್ಳಿ-ಬೀಳೆಗೊಡ ಗ್ರಾಮಗಳಲ್ಲಿ ಅನಿವಾರ್ಯ ಕಾರಣಗಳಿಂದ ನಿಂತು ಹೋಗಿದ್ದ ದೀಪಾವಳಿ ಹಬ್ಬವನ್ನು ಇದೀಗ ಹುಣ್ಣಿಮೆಗೆ ಗೋವುಗಳೊಂದಿಗೆ ವಿಶಿಷ್ಟವಾಗಿ ಆಚರಿಸಿದರು.
ಒಂದೆಡೆ ಕಾಲ್ಕಿತ್ತು ಓಡುತ್ತಿರುವ ಹೋರಿಗಳು, ಇನ್ನೊಂದೆಡೆ ಅವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿದ್ದ ಯುವಕರ ಸಾಹಸಮಯ ದೃಶ್ಯಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಹೌದು, ಬಲೀಂದ್ರನನ್ನು ತಂದು ವಿಶೇಷ ಪೂಜೆ ಸಲಿಸಿದ ರೈತರು ಬಲಿಪಾಡ ದಿನವಾದ ಇಂದು ಗೋವುಗಳಿಗೆ ಸಿಂಗಾರ, ರೊಟ್ಟಿ, ಪತ್ತೆತೆನ್ನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವುಗಳನ್ನು ಚೌಲೂ, ಬಲೂನ್, ಬಾಸಿಂಗ ಸೇರಿದಂತೆ ಬಣ್ಣದ ಕಾಗದ ಹೂವುಗಳಿಂದ ಶೃಂಗರಿಸಿ ಬೆದರಿಸಲಾಯಿತು. ಹೋರಿಗಳ ಓಟ ಹಾರಾಟ ಆಕರ್ಷಕವಾಗಿತ್ತು.
ಇನ್ನು ಹುಣ್ಣಿಮೆ ಪಾಡ್ಯದ ವೇಳೆ ಆಚರಣೆ ಮಾಡುವ ದೀಪಾವಳಿ ಹಬ್ಬವನ್ನು ಊರಿನ ಜನರು ಒಟ್ಟುಗೂಡಿ ವಿಜೃಂಭಣೆಯಿಂದ ಆಚರಿಸಿದರು. ಅದರಲ್ಲಿಯೂ ತಮ್ಮೊಂದಿಗೆ ದುಡಿದು ತಮ್ಮ ಮನೆಗೆ ಆಧಾರವಾಗಿರುವ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಶೇಷವಾಗಿ ಸಿದ್ದಾಪುರದ ಬಾನ್ಕುಳಿ ಮಠದಿಂದ ಹೋರಿಗಳನ್ನು ತಂದು ಅವುಗಳನ್ನು ಶೃಂಗರಿಸಿ ಮೆರವಣಿಗೆ ನಡೆಸಲಾಯಿತು. ಈ ಹಿಂದೆ ಗ್ರಾಮಗಳಲ್ಲಿಯೇ ಸಾಕಷ್ಟು ಗೋವುಗಳು ಇರುತ್ತಿದ್ದವು. ಆದರೆ, ಇದೀಗ ಯಂತ್ರೋಪಕರಣ ಬಳಕೆ ಪರಿಣಾಮ ಗೋವುಗಳನ್ನು ಸಾಕುವವರ ಪ್ರಮಾಣ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಮಠದಿಂದ ಹೋರಿಗಳನ್ನು ತಂದು ವಿಶೇಷ ಪೂಜೆ ಸಲ್ಲಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಾವಿರಾರು ಜನರು ಆಗಮಿಸಿದ್ದರು. ಸಂಬಂಧಿಕರೊಂದಿಗೆ ವಿಶೇಷವಾಗಿ ಹಬ್ಬವನ್ನು ಆಚರಿಸಿದ ಗ್ರಾಮಸ್ಥರ ಈ ಪ್ರಯತ್ನಕ್ಕೆ ನೆಂಟರಿಷ್ಟರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚೆಗೆ ಗೋವುಗಳು ನೋಡಲು ಸಿಗುವುದೇ ಕಡಿಮೆ ಅಂತಹದರಲ್ಲಿ ಇಷ್ಟೊಂದು ವಿಶೇಷವಾಗಿ ಗೋವುಗಳನ್ನು ತಂದು ಹಬ್ಬವನ್ನು ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ. ಹೋರಿಗಳ ಶೃಂಗಾರ, ಓಟ ಎಲ್ಲವೂ ತುಂಬಾ ಚೆನ್ನಾಗಿತ್ತು. ನಮ್ಮ ಸಮುದಾಯದಲ್ಲಿರುವ ಈ ಸಂಪ್ರದಾಯ ಹೀಗೆ ಮುಂದುವರಿಯಬೇಕು ಎಂದು ಗ್ರಾಮಸ್ಥರು ಹೇಳಿದರು.
ಇದನ್ನೂ ಓದಿ: ಶಿವಮೊಗ್ಗ ಸ್ಪೆಷಲ್: ಅರೆ ಮಲೆನಾಡಿನಲ್ಲಿ ಕ್ರೇಜ್ ಹುಟ್ಟಿಸುವ ಹೋರಿ ಬೆದರಿಸುವ ಹಬ್ಬ; ಹೀಗಿದೆ ಇತಿಹಾಸ!