ತುಮಕೂರು: ಮೋದಿ ಪ್ರಧಾನಿಯಾದ ನಂತರ ಕೇಂದ್ರ ಸರ್ಕಾರದಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ನೀಡಲಾಗಿರುವಂತಹ ಸಂವಿಧಾನಾತ್ಮಕ ಪ್ರಾಮುಖ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ 65 ವರ್ಷಗಳವರೆಗೂ ಸಹಕಾರಿ ಸಂಘಗಳಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಲಭ್ಯವಾಗಿರಲಿಲ್ಲ. ಆದರೆ ನಾನು ಅಲ್ಪಾವಧಿಯಲ್ಲಿ ಸಹಕಾರಿ ಸಚಿವರಾದ ನಂತರ ಹಿಂದುಳಿದ ವರ್ಗಕ್ಕೆ ಮೀಸಲಾತಿಯನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ನೆದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಬಿಜೆಪಿಯವರು ಹಿಂದುಳಿದ ವರ್ಗಗಳ ವಿರೋಧಿ ಎಂದು ಆರೋಪಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಪ್ರಶ್ನಿಸಿದರು.
ದೇವೇಗೌಡರ ಕುಟುಂಬದ ವಿರುದ್ಧ ಹಿಂದೆಂದೂ ಕೂಡ ಜನರು ಸಿಡಿದೆದ್ದಿರಲಿಲ್ಲ. ಸದ್ಯದ ಪರಿಸ್ಥಿತಿ ಕಂಡು ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಈಗ ಆತಂಕ ಆರಂಭವಾಗಿದೆ. ದೇವೇಗೌಡರ ಕುಟುಂಬದ ಒಂದನೇ ತಲೆಮಾರು, ಎರಡನೇ ತಲೆಮಾರು ಮತ್ತು ಮೂರನೇ ತಲೆಮಾರಿನ ವಿರುದ್ಧ ರಾಜ್ಯದ ಮತದಾರರು ಅದರಲ್ಲೂ ಅವರ ಸಮುದಾಯದವರೇ ಸಿಡಿದೆದ್ದಿದ್ದಾರೆ. ದೇವೇಗೌಡ ಮುಕ್ತ ರಾಜ್ಯ ಮಾಡಬೇಕೆಂದು ಹಾಸನ, ಮಂಡ್ಯ ಮತ್ತು ತುಮಕೂರಿನ ಜನ ನಿರ್ಧರಿಸಿದ್ದಾರೆ ಎಂದು ಪುಟ್ಟಸ್ವಾಮಿ ತಿಳಿಸಿದರು. ಶೀಘ್ರದಲ್ಲೇ ಈ ಮೂರು ಕ್ಷೇತ್ರಗಳಲ್ಲಿ ದೇವೇಗೌಡ ಮುಕ್ತ ವ್ಯವಸ್ಥೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.