ತುಮಕೂರು: ಮಂಗಳೂರು ಗಲಭೆಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೆಟ್ರೋಲ್ ಬಾಂಬ್ ಹಾಕಿದ್ದಾರೆಂಬುದರ ಕುರಿತ ವಿಡಿಯೋ ತುಣುಕುಗಳು ನಮಗೆ ಲಭ್ಯವಾಗಿವೆ. ತನಿಖೆ ಸಂದರ್ಭದಲ್ಲಿ ಇದನ್ನು ಪರಿಗಣಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತುಮಕೂರಿಗೆ ಜನವರಿ 3 ರಂದು ಪ್ರಧಾನಿ ಮೋದಿ ಅವರ ಆಗಮನ ಹಿನ್ನೆಲೆ ಜೂನಿಯರ್ ಕಾಲೇಜು ಮೈದಾನವನ್ನು ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ಇಂದು ಸಂಜೆ ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಗಲಭೆ ಸಂದರ್ಭದಲ್ಲಿ ಸಾವಿಗೀಡಾದ ಸಂತ್ರಸ್ತರಿಗೆ ಪರಿಹಾರ ಮತ್ತು ತನಿಖೆ ಕುರಿತಂತೆ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ತಿಳಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿಯಾನವನ್ನು ನಡೆಸಲಿದೆ. ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣ ಹೇರಲು ಸೈಬರ್ ಕ್ರೈಮ್ ಕಾನೂನನ್ನು ಬಳಸಿಕೊಳ್ಳಲಾಗುವುದು ಎಂದರು. ಪರ-ವಿರೋಧದ ಚರ್ಚೆಯಲ್ಲಿ ಹದ್ದು ಮೀರುವವರ ವಿರುದ್ಧ ಸೈಬರ್ ಕ್ರೈಮ್ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ನರೇಂದ್ರ ಮೋದಿ ತುಮಕೂರಿಗೆ ಭೇಟಿ ನೀಡಿ, ರೈತ ಸಮ್ಮಾನ್ ಯೋಜನೆಯ 2ನೇ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಅಂದು ನಡೆಯಲಿರುವ ರೈತರ ಸಮಾವೇಶ ಕಾರ್ಯಕ್ರಮದಲ್ಲಿ ರಾಜ್ಯದ 50,000 ರೈತರು ಪಾಲ್ಗೊಳ್ಳಲಿದ್ದಾರೆ. ತುಮಕೂರು ಜಿಲ್ಲೆ ಪ್ರಗತಿಪರವಾದ ಜಿಲ್ಲೆಯಾಗಿರುವುದರಿಂದ ಮೋದಿಯವರ ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಕಾರ್ಯಕ್ರಮದ ಮುಂಚಿತವಾಗಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ದರ್ಶನ ಪಡೆಯಲಿದ್ದಾರೆ. ನಂತರ ಸುಮಾರು ಅರ್ಧ ಗಂಟೆಗಳ ಕಾಲ ಮಠದಲ್ಲಿ ಇರುತ್ತಾರೆ ಎಂದು ತಿಳಿಸಿದರು.