ತುಮಕೂರು: ಅಲ್ಲಮ ಪ್ರಭು, ಅಕ್ಕಮಹಾದೇವಿ ಅವರ ಸಾಲಿನಲ್ಲಿ ಗುರು ಸಿದ್ದರಾಮೇಶ್ವರ ನಿಲ್ಲುತ್ತಾರೆ. ಸಾಮಾಜಿಕ ಮತ್ತು ವಚನ ಕ್ರಾಂತಿಗಾಗಿ ನಾಡಿನೆಲ್ಲೆಡೆ ಸಂಚರಿಸಿ ಜನರ ನೀರಿನ ದಾಹ ಇಂಗಿಸುವ ಜೊತೆಗೆ ಕಾಯಕ ನಿಷ್ಠೆ, ಕೃಷಿ ಪರತೆ, ಉತ್ತಮ ಆದರ್ಶ ಗುಣಗಳನ್ನು ಸಮಾಜಕ್ಕೆ ನೀಡಿದ ಗುರು ಸಿದ್ದರಾಮೇಶ್ವರರು ಸದಾ ಪ್ರೇರಕ ಶಕ್ತಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು. ತಿಪಟೂರು ಪಟ್ಟಣದಲ್ಲಿ ನಡೆದ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಅನೇಕ ವರ್ಷಗಳಿಂದ ಗುರು ಸಿದ್ದರಾಮೇಶ್ವರರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಅವರ ಕಾರ್ಯಕ್ರಮ ಎಲ್ಲೇ ನಡೆದರೂ ನಾನು ಪಾಲ್ಗೊಳ್ಳುತ್ತೇನೆ. ನಾಡಿನ ಮಠ-ಮಾನ್ಯಗಳ ಮೇಲೆ ಅಪಾರ ಭಕ್ತಿ ಹೊಂದಿದ್ದು, ನಾನು ಸಿಎಂ ಆಗಿದ್ದಾಗ ರೈತರಿಗಾಗಿ, ಹಾಲು ಉತ್ಪಾದಕರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದೇನೆ. ಮಠ ಮಾನ್ಯಗಳ ಅಭಿವೃದ್ಧಿಗಾಗಿ ಅನುದಾನ ಕೊಟ್ಟಿದ್ದೇನೆ ಎಂದು ನೆನಪು ಮಾಡಿಕೊಂಡರು.
'ಮೋದಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ': ಹೆಣ್ಣು ಮಕ್ಕಳು ಹುಟ್ಟಿದರೆ ಕಣ್ಣೀರು ಹಾಕುತಿದ್ದರು. ನಾನು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದು ಆ ಕಣ್ಣೀರು ಒರೆಸಿದ್ದೇನೆ. ಇಂದು 25 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಹಣ ಸಿಕ್ಕಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಇಡೀ ವಿಶ್ವವೇ ಪ್ರಧಾನಿಯನ್ನು ಹಾಡಿ ಹೊಗಳುತ್ತಿದೆ. ಕಳೆದ 8 ವರ್ಷದಲ್ಲಿ ಒಂದು ದಿನವೂ ಅವರು ವಿಶ್ರಾಂತಿ ತೆಗೆದುಕೊಂಡಿಲ್ಲ. ನಮ್ಮ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತಿದ್ದಾರೆ. ಯವಕರಿಗೆ ಮೋದಿ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅದ್ಧೂರಿಯಾಗಿ ಜರುಗಿದ 849ನೇ ಗುರು ಸಿದ್ದರಾಮೇಶ್ವರ ಜಯಂತಿ ಮೆರವಣಿಗೆ
'ವೈಯಕ್ತಿಕ ನಿಂದನೆ ಬೇಡ': ಸಿರಿಗೆರೆ ತರಳಬಾಳು ಶ್ರೀಗಳು ಮಾತನಾಡಿ, ನಮ್ಮ ಸಮುದಾಯದ ನಾಯಕರುಗಳು ಯಾವುದೇ ಪಕ್ಷದಲ್ಲಿರಲಿ, ಯಾರ ಬಗ್ಗೆಯೂ ವೈಯಕ್ತಿಕ ನಿಂದನೆ ಮಾಡಬಾರದು. ಜನರ ಸಂಕಷ್ಟಗಳನ್ನು ನಿವಾರಣೆ ಮಾಡಬೇಕು. ರಾಜಕೀಯ ಸಭೆಗಳಲ್ಲಿ ನಿಂದನೆ, ವೈಯಕ್ತಿಕ ವಿಷಯಗಳ ಪ್ರಸ್ತಾಪ, ಅವಹೇಳನಕಾರಿ ಮಾತು ಹೆಚ್ಚಾಗುತ್ತಿದ್ದು, ಕೆಟ್ಟ ವಾತಾವರಣ ನಿರ್ಮಾಣವಾಗುತ್ತಿದೆ. ವ್ಯಕ್ತಿಗತ, ವೈಯಕ್ತಿಕ ನಿಂದನೆಗಳಿಂದ ಜನರಿಗೆ ಕೆಟ್ಟಸಂದೇಶ ರವಾನೆಯಾಗಲಿದೆ ಎಂದು ಕಿವಿಮಾತು ಹೇಳಿದರು.
ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣದ ಕುರಿತು ಪ್ರತಿಕ್ರಿಯಿಸಿ, ರೈತರಿಗೆ ಕೃಷಿ ಬಿಟ್ಟರೆ ಬೇರೆ ಏನೂ ಬರುವುದಿಲ್ಲ. ಸರ್ಕಾರ ಅವರ ಜಮೀನು ತೆಗೆದುಕೊಂಡು 50 ಲಕ್ಷ ಅಥವಾ ಒಂದು ಕೋಟಿ ರೂಪಾಯಿ ಕೊಡಬಹುದು. ಜಮೀನು ಕೊಟ್ಟ ಬಳಿಕ ಅವರು ಬೀದಿ ಬಿಕಾರಿಗಳಾಗ್ತಾರೆ. ಬೇರೆ ಉದ್ಯೋಗ ಮಾಡುವುದು ಅವರಿಗೆ ಗೊತ್ತಿಲ್ಲ. ಉದ್ದಿಮೆದಾರರು ಬೇರೆ ಬೇರೆ ಬಾಬ್ತುಗಳಿಗೆ ಹೇಗೆ ಖರ್ಚು ಮಾಡ್ತಾರೋ, ಹಾಗೆ ರೈತನನ್ನು ಪಾರ್ಟ್ನರ್ ಆಗಿ ತೆಗೆದುಕೊಳ್ಳಿ ಅಂತಾ ನಾವು ಹೇಳುವುದಿಲ್ಲ. ಆದ್ರೆ, ರೈತನೇ ಭೂ ಒಡೆಯನಾಗಿರಬೇಕು. ಅವನು ಏನು ಉಳುಮೆ ಮಾಡಿದ್ರೆ ಆದಾಯ ಬರುತ್ತಿತ್ತೋ ಆ ಆದಾಯ ಖಾಯಂ ಆಗಿ ಪ್ರತಿ ತಿಂಗಳಿಗೆ, 6 ತಿಂಗಳಿಗೆ, ಇಲ್ಲ ವರ್ಷಕ್ಕೆ ಅನ್ನದಾತರಿಗೆ ಕೊಡಬೇಕು ಎಂದರು.
ಇದನ್ನೂ ಓದಿ: ಸಿದ್ದರಾಮೇಶ್ವರರ ಜಾತಿ ಕುರಿತು ಹೇಳಿಕೆ: ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ರೋಶ
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಸಚಿವ ಬಿ.ಸಿ.ನಾಗೇಶ್, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಗುರುಪರದೇಶಿ ಕೇಂದ್ರ ಸ್ವಾಮೀಜಿ, ಸಂಸದ ಜಿ.ಎಸ್.ಬಸವರಾಜ್, ಶಾಸಕ ಮಸಾಲೆ ಜಯರಾಮ್, ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.