ತುಮಕೂರು: ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಎಲ್ಲರೂ ಮುಖ್ಯಮಂತ್ರಿ ಆಗುವ ಬಗ್ಗೆ ಹಗಲು ಕನಸು ಕಾಣ್ತಾ ಇದ್ದಾರೆ. ಅವರದ್ದು ತಿರುಕನ ಕನಸು, ಅದು ನನಸಾಗೋದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.
ತುರುವೇಕೆರೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ನಿರೀಕ್ಷೆ ಮೀರಿ ಜನಬೆಂಬಲ ಸಿಗ್ತಾ ಇದೆ. ಇದೆಲ್ಲ ವಾತಾವರಣ ನೋಡಿದ್ರೆ ನಾವು ನಿರೀಕ್ಷೆ ಮಾಡಿದ ಹಾಗೆಯೇ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಪುನರುಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಬಲದೊಂದಿಗೆ, ನಾವು ಮತ್ತೆ ಅಧಿಕಾರಕ್ಕೆ ಏರೋದನ್ನ ಯಾರಿಂದಲೂ ತಡೆಯೋದಕ್ಕಾಗಲ್ಲ. ಕೇಂದ್ರ ಮತ್ತು ರಾಜ್ಯದಿಂದ ಮೂರು ಸರ್ವೇ ಮಾಡಲಾಗಿದೆ ಎಂದು ಬಿಎಸ್ವೈ ತಿಳಿಸಿದರು.
ಕಾಂಗ್ರೆಸ್ ಉಚಿತ ಯೋಜನೆಗಳನ್ನ ಘೋಷಣೆ ಮಾಡುತ್ತಿದ್ದಾರೆ: ಮೂರು ಸರ್ವೇನಲ್ಲೂ 130ರಿಂದ 140 ಸೀಟ್ ಪಡೆಯೋದಾಗಿ ರಿಪೋರ್ಟ್ ಬಂದಿದೆ. ಈ ರಿಪೋರ್ಟ್ ನೋಡಿಯೇ ಕಾಂಗ್ರೆಸ್ ಪಕ್ಷದವರಿಗೆ ದಿಗಿಲು ಹುಟ್ಟಿದೆ. ಹಾಗಾಗಿ ಕಾಂಗ್ರೆಸ್ ಉಚಿತ ಯೋಜನೆಗಳನ್ನ ಘೋಷಣೆ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ: ಇದುವರೆಗೂ ಉದ್ಯೋಗ ಕೊಡದೆ ಇದ್ದವರು ಈಗ ನಿರುದ್ಯೋಗ ಭತ್ಯೆ ಕೊಡಲು ಹೊರಟಿದ್ದಾರೆ. ಅಧಿಕಾರಕ್ಕೆ ಬರದೇ ಇರುವಂತಹ ಪಕ್ಷ ಏನಾದ್ರೂ ಭರವಸೆಗಳನ್ನ ನೀಡಬಹುದು ಎಂದು ಹೇಳಿದರು. ಬೇರೆ ಬೇರೆ ರಾಜ್ಯಗಳಲ್ಲಿ ಇದೇ ರೀತಿ ಭರವಸೆಗಳನ್ನ ಕೊಟ್ಟು ಯಾವುದನ್ನೂ ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಟಿಕೆಟ್ ಕೊಡಲು ಸಿದ್ಧವಿದ್ರೂ ಚಿಂಚನಸೂರ್ ಪಕ್ಷ ಬಿಟ್ರು: ಇನ್ನೊಂದೆಡೆ ಟಿಕೆಟ್ ನೀಡುವುದೂ ಸೇರಿ ಎಲ್ಲದಕ್ಕೂ ನಾವು ಸಿದ್ಧವಿದ್ದರೂ ಬಾಬುರಾವ್ ಚಿಂಚನಸೂರ್ ಬಿಜೆಪಿ ಬಿಟ್ಟು ಹೋಗಿದ್ದಾರೆ. ಅದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದರು.
ಅಧಿಕೃತ ನಿವಾಸ ಕಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರು ಬಿಜೆಪಿ ಬಿಟ್ಟಿದ್ದಾರೆ. ಏನೂ ಮಾಡಲು ಬರಲ್ಲ. ಮೊನ್ನೆ ತಾನೇ ಗಂಡ ಹೆಂಡತಿ ಬಂದು ಕಾಲು ಹಿಡ್ಕೊಂಡಿದ್ರು. ನಾನು ಎಲ್ಲೂ ಹೋಗಲ್ಲ ಅಂದಿದ್ದರು. ಆದರೆ ಈಗ ಹೋಗಿದ್ದಾರೆ. ಬೇರೆ ಬೇರೆ ಒತ್ತಡಕ್ಕೆ ಹೋಗಿರಬಹುದು. ಟಿಕೆಟ್ ನೀಡುವುದು ಸೇರಿದಂತೆ ನಾವು ಎಲ್ಲದಕ್ಕೂ ಸಿದ್ಧ ಇದ್ದೆವು. ಆದರೂ ಅವರು ಹೋದರು. ಆಗಿದ್ದು ಆಯ್ತು ಈಗ ಬಿಟ್ಟು ಹೋಗಿದ್ದಾರೆ. ಈಗ ಯಾಕೆ ಚರ್ಚೆ? ಎಂದರು.
ಕಾಂಗ್ರೆಸ್ಗೆ ಯಾವುದೇ ಲಾಭವಿಲ್ಲ-ಬಿಎಸ್ವೈ: ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಆ ಯೋಜನೆಗೆ ಎಲ್ಲಿ ಬೆಲೆ ಇದೆ? ಹಿಂದೆಲ್ಲ ಬೇರೆ ರಾಜ್ಯದಲ್ಲಿ ಯೋಜನೆ ಘೋಷಣೆ ಮಾಡಿದ್ದು ಕಾರ್ಯರೂಪಕ್ಕೆ ಬಂದಿದ್ಯಾ? ಅಭಿವೃದ್ಧಿ ಕಾರ್ಯಕ್ಕೆ ಎಲ್ಲಿ ಹಣ ಉಳಿಯುತ್ತದೆ. ಅವರು ಘೋಷಣೆ ಮಾಡಿದ್ದು ನೋಡಿದರೆ ಉಚಿತ ಯೋಜನೆ ಮತ್ತು ಸರ್ಕಾರಿ ಸಂಬಳ ಕೊಡೋಕೆ ಅಷ್ಟೇ ರಾಜ್ಯದ ಬಜೆಟ್ ಸಾಲುತ್ತದೆ. ಇನ್ನೆಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣ ಉಳಿಯುತ್ತದೆ. ಅಧಿಕಾರಕ್ಕೆ ಬರಲ್ಲ ಅಂದಾಗ ಜನರಲ್ಲಿ ಗೊಂದಲ ಉಂಟು ಮಾಡಲು ಈ ರೀತಿಯ ಸುಳ್ಳು ಭರವಸೆ ಕೊಡುತ್ತಾರೆ. ಇಂತಹ ಭರವಸೆಗಳಿಂದ ಕಾಂಗ್ರೆಸ್ ಗೆ ಯಾವುದೇ ಲಾಭವಿಲ್ಲ. ಅವರಿಗೆ ಬಿಜೆಪಿ ಮೇಲೆ ತುಂಬ ಭಯ ಇದೆ ಎಂದು ಬಿಎಸ್ವೈ ಹೇಳಿದರು.
ಇದನ್ನೂ ಓದಿ : ಟಿಕೆಟ್ ಕೊಡಲು ಸಿದ್ದವಿದ್ರೂ ಚಿಂಚನಸೂರ್ ಪಕ್ಷ ಬಿಟ್ರು: ಬಿ.ಎಸ್.ಯಡಿಯೂರಪ್ಪ