ತುಮಕೂರು : ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ಮಧುಗಿರಿ ಮತ್ತು ಕೊರಟಗೆರೆ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ಜಯಮಂಗಲಿ ನದಿ ತುಂಬಿ ಹರಿಯುತ್ತಿದೆ. ಜಯಮಂಗಲಿ ನದಿ ದಶಕಗಳ ನಂತರ 100 ದಿನಗಳನ್ನೂ ಮೀರಿ ಹರಿಯುತ್ತಿದ್ದು, ಈ ಭಾಗದ ಜನರು ಮತ್ತು ರೈತರಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯ ದೇವರಾಯನ ದುರ್ಗ ಬೆಟ್ಟದಲ್ಲಿ ಹುಟ್ಟಿ ಆಂಧ್ರಪ್ರದೇಶದ ಬಂಗಾಳಕೊಲ್ಲಿ ಸೇರುವ ಜಯ ಮಂಗಲಿ ನದಿಯು ತುಮಕೂರು, ಕೊರಟಗೆರೆ, ಮಧುಗಿರಿ ಹಾಗೂ ಆಂಧ್ರದ ಮಡಕಶಿರಾ ತಾಲೂಕಿನಲ್ಲಿ ಹರಿಯುತ್ತದೆ. ಕಳೆದ ವರ್ಷ ನವೆಂಬರ್ ನಲ್ಲಿ ಕೇವಲ 20 ದಿನ ಹರಿದಿತ್ತು. ಆದರೆ ಈ ವರ್ಷ ಆಗಸ್ಟ್ 1ರಿಂದ ಆರಂಭವಾಗಿ ನೂರಕ್ಕೂ ಹೆಚ್ಚು ದಿನ ಹರಿದಿರುವುದು ಗಮನಾರ್ಹ ಸಂಗತಿಯಾಗಿದೆ.
ಜಯಮಂಗಲಿ ನದಿ 60 ವರ್ಷಗಳ ಹಿಂದೆ ವರ್ಷಕ್ಕೆ ಕನಿಷ್ಠ ಒಂದರಿಂದ ಎರಡು ತಿಂಗಳ ಕಾಲ ಹರಿಯುತ್ತಿತ್ತು. ಈ ಭಾಗದ ಕೆರೆಗಳು ತುಂಬಿ ಹೆಚ್ಚುವರಿ ನೀರು ಆಂಧ್ರದತ್ತ ಹರಿದು ಹೋಗುತ್ತಿತ್ತು. ಅಂದಿನ ಸರ್ಕಾರ ಈ ಭಾಗದ ಜನರ ಉಪಯೋಗಕ್ಕೆಂದು ಸುಮಾರು 40 ವರ್ಷಗಳ ಹಿಂದೆ ಜಯಮಂಗಲಿ ನದಿಗೆ ಅಡ್ಡಲಾಗಿ ಗೊರವನಹಳ್ಳಿ ಬಳಿ ಟೀತ ಡ್ಯಾಮ್ ನಿರ್ಮಿಸಿತ್ತು. ಬಳಿಕ ಮಳೆ ಪ್ರಮಾಣ ಕ್ಷೀಣಿಸಿದಂತೆ ನದಿ ಹರಿದು ದಶಕಗಳೇ ಕಳೆದುಹೋಗಿತ್ತು. ಅಲ್ಲದೆ ನದಿ ನೀರು ಖಾಲಿಯಾಗಿ ಮರಳು ಸಾಗಣೆ ಆರಂಭವಾಗಿತ್ತು. ಬಳಿಕ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿತ್ತು.
ಇದೀಗ ಮತ್ತೆ ಜಯಮಂಗಲಿ ನದಿ ನೂರು ದಿನಗಳಿಗೂ ಹೆಚ್ಚು ಕಾಲ ನೀರು ಹರಿಯುತ್ತಿರುವುದು ಸುತ್ತಮುತ್ತಲ ಬೋರ್ವೆಲ್ ಗಳಲ್ಲಿ ಅಂತರ್ಜಲ ಪ್ರಮಾಣ ಹೆಚ್ಚುವಂತೆ ಮಾಡಿದೆ.
ಇದನ್ನೂ ಓದಿ : ತುಮಕೂರಿನಲ್ಲಿ ಭಾರಿ ಮಳೆ.. ಕೆರೆ ಕಟ್ಟೆಗಳು ಒಡೆದು ಬೆಳೆ ನಷ್ಟ