ತುಮಕೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಕೆಂಚಗಾನಹಳ್ಳಿ ಗೇಟ್ ಬಳಿ ಸಂಭವಿಸಿದೆ. ಶ್ರೀನಿವಾಸ್ (45) ಮತ್ತು ವೆಂಕಟೇಶ್ (60) ಮೃತ ವ್ಯಕ್ತಿಗಳು. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಪ್ರಾಣ ಕಳೆದುಕೊಂಡಿದ್ದು ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ.
ಮೃತರು ಪಾವಗಡ ತಾಲೂಕಿನ ನೀಲಮ್ಮನಹಳ್ಳಿಯ ನಿವಾಸಿಗಳಾಗಿದ್ದು, ಇಂದು ಮಧ್ಯಾಹ್ನ ನೀಲಮ್ಮನಹಳ್ಳಿ ಕಡೆಯಿಂದ ಪಾವಗಡ ಕಡೆ ಬೈಕ್ನಲ್ಲಿ ತೆರಳುತ್ತಿದ್ರು. ಈ ವೇಳೆ ಪಾವಗಡ ಕಡೆಯಿಂದ ಬರುತ್ತಿದ್ದ ಕಾರು ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಬೈಕ್ ಸವಾರ ನಾರಾಯಣ್ ಸ್ಥಿತಿ ಗಂಭೀರವಾಗಿದೆ.
ಗಾಯಾಳು ವ್ಯಕ್ತಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.