ತುಮಕೂರು: ತಹಶೀಲ್ದಾರ್ ಕಚೇರಿಯಲ್ಲಿ ಜಮೀನಿನ 1-5 ನಮೂನೆಯನ್ನು ಭರ್ತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಖಾಸಗಿ ಬ್ರೋಕರ್ಗಳು ರೈತರಿಂದ 1.20 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಬ್ರೋಕರ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಕರಿಕೆರೆ ಗ್ರಾಮದ ರಂಗನಾಥ್ ಎಂಬುವರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದರು. ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಖಾಸಗಿ ಬ್ರೋಕರ್ಗಳಾದ ರುದ್ರಸ್ವಾಮಿ ಮತ್ತು ಶಿವಕುಮಾರ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜುಲೈ 1ರಂದು ಬೆಳಗ್ಗೆ 8.30ಕ್ಕೆ ತುಮಕೂರು ನಗರದ ಎಸ್ಎಸ್ ಪುರಂ ಕ್ರಾಸ್ ಉಪ್ಪಾರಳ್ಳಿ ಫ್ಲೈ ಓವರ್ ಬಳಿ ಆರೋಪಿ ರುದ್ರಸ್ವಾಮಿ ಎಂಬಾತ ರೈತ ರಂಗಸ್ವಾಮಿ ಅವರಿಂದ 1.20 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ಉಮಾಶಂಕರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಲಂಚದ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದು ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.