ತುಮಕೂರು: ಗಂಡನ ಮೇಲೆ ಪೆಟ್ರೋಲ್ ಸುರಿದ ಪತ್ನಿಯೊಬ್ಬಳು ಆತನನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ಇನ್ನು ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರ ಓಡಿ ಬಂದ್ರೂ ಬಿಡದ ಆಕೆ ಚರಂಡಿಗೆ ತಳ್ಳಿ ತಲೆಮೇಲೆ ಕಲ್ಲು ಎತ್ತಿ ಹಾಕಿ ದಾರುಣವಾಗಿ ಹತ್ಯೆ ಮಾಡಿದ್ದಾಳೆ.
ತುಮಕೂರಿನ ಬಡ್ಡಿಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ನಾರಾಯಣ (52) ಮೃತ ದುರ್ದೈವಿ. ಈತನ ಪತ್ನಿ ಅನ್ನಪೂರ್ಣ ಕೊಲೆ ಆರೋಪ ಹೊತ್ತಿರುವ ಆರೋಪಿ. ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಪ್ರತಿನಿತ್ಯ ಜಗಳ ಆಗುತ್ತಲೇ ಇತ್ತಂತೆ. ಈ ಕಾರಣಕ್ಕೆ ಗಂಡನನ್ನು ಮುಗಿಸಲು ಸ್ಕೆಚ್ ಹಾಕಿದ ಪತ್ನಿ, ಪೆಟ್ರೋಲ್ ಸುರಿದು ಕೊಲೆ ಭೀಕರವಾಗಿ ಕೃತ್ಯ ಎಸಗಿದ್ದಾಳೆ.
ಘಟನೆಯ ಮತ್ತಷ್ಟು ವಿವರ..
ಮೃತ ನಾರಾಯಣ ನೆಲಮಂಗಲ ಬಳಿಯ ಟೋಲ್ನಲ್ಲಿ ಕೆಲಸ ಮಾಡಿಕೊಂಡಿಕೊಂಡು ಸಂಸಾರ ನಡೆಸುತ್ತಿದ್ದ, 18 ವರ್ಷದ ಹಿಂದೆ ಅನ್ನಪೂರ್ಣಳನ್ನು ಮದುವೆಯಾಗಿದ್ದು, ಇವರಿಬ್ಬರಿಗೆ ಮೂರು ಮಕ್ಕಳಿದ್ದಾರೆ. ಇವರ ಸಂಸಾರ ಸುಂದರವಾಗಿಯೇ ನಡೆದಿತ್ತು. ಇದರ ನಡುವೆ ಎದುರು ಮನೆಯ ವ್ಯಕ್ತಿ ರಾಮಕೃಷ್ಣ ಎಂಬುನೊಂದಿಗೆ ಅನ್ನಪೂರ್ಣ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆ. ಈ ಸಂಬಂಧ ಗಂಡ ಹೆಂಡತಿ ನಡುವೆ ಕಳೆದ 10 ವರ್ಷದಿಂದ ಜಗಳ ನಡೆಯುತ್ತಲೇ ಇತ್ತು.
ಜಗಳದ ಬಿಸಿ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿ ತಣ್ಣಗಾಗಿತ್ತು. ಪೊಲೀಸರು, ಸಂಬಂಧಿಕರು, ಹಿರಿಯರು ಜಗಳ ಬಿಡಿಸಿ ಸಮಾಧಾನ ಮಾಡಿದ್ದರು. ಇಷ್ಟೆಲ್ಲಾ ಆದ್ರೂ ಅನ್ನಪೂರ್ಣ ಹಾಗೂ ರಾಮಕೃಷ್ಣನ ನಡುವಿನ ಅಕ್ರಮ ಸಂಬಂಧ ಮಾತ್ರ ಮುಂದುವರೆದಿತ್ತು ಎನ್ನಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ನಿನ್ನೆ ಇಬ್ಬರ ನಡುವೆ ಜೋರು ಜಗಳ ನಡೆದಿದೆ. ಜಗಳ ತಾರಕಕ್ಕೇರಿದೆ, ಕೂಡಲೇ ಮನೆಯಲ್ಲಿದ್ದ ಪ್ರೆಟೋಲ್ ಸುರಿದು ಕಿರಾತಕಿ ತನ್ನ ಗಂಡನಿಗೆ ಬೆಂಕಿ ಹಚ್ಚಿದ್ದಾಳೆ. ಪ್ರಾಣ ಉಳಿಸಿಕೊಳ್ಳಲು ನಾರಾಯಣ್ ಮನೆಯಿಂದ ಹೊರಗೆ ಓಡಿ ಬಂದಿದ್ದಾನೆ. ಗಂಡನನ್ನು ಅಟ್ಟಿಸಿಕೊಂಡು ಬಂದ ಹೆಂಡತಿ ಆತನನ್ನು ಮನೆಯ ಮುಂದಿನ ಚರಂಡಿಗೆ ತಳ್ಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ.
ಇನ್ನು ಗಂಡನ ಕಿರುಕುಳ ತಾಳಲಾರದೆ ಕೊಲೆ ಮಾಡಿದ್ದೇನೆಂದು ಪೊಲೀಸರ ಎದುರು ಅನ್ನಪೂರ್ಣ ತಪ್ಪೊಪ್ಪಿಕೊಂಡಿದ್ದಾಳೆ. ಕೊಲೆಗೆ ಸಹಕಾರ ನೀಡಿದ ಆರೋಪದ ಮೇಲೆ ರಾಮಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.