ತುಮಕೂರು: ಸಾಮಾನ್ಯವಾಗಿ ಉದ್ಯಾನವನಗಳೆಂದರೆ ಅಲ್ಲಿ ಮಕ್ಕಳ ಆಟಿಕೆ, ಒಂದಷ್ಟು ಆಕರ್ಷಕ ಹೂ ಗಿಡಗಳನ್ನು ಬೆಳೆಸಿರುತ್ತಾರೆ. ಆದರೆ, ತುಮಕೂರಿನ ಅರಣ್ಯ ಇಲಾಖೆ ವಿಭಿನ್ನವಾದ ಉದ್ಯಾನವನವೊಂದನ್ನು ಪೋಷಿಸುತ್ತಿದೆ.
ಗುಬ್ಬಿಯಿಂದ ಬಳಿಯ ಸುಮಾರು 700 ಎಕರೆಯಲ್ಲಿ ವಿಸ್ತರಿಸಿಕೊಂಡಿರುವ ಹೊನ್ನವಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 25 ಎಕರೆಗೂ ಅಧಿಕ ವಿಸ್ತೀರ್ಣದಲ್ಲಿ ಪಾರ್ಕ್ ಒಂದನ್ನು ತೆರೆಯಲಾಗಿದೆ. ಇದಕ್ಕೆ ಸಾಲುಮರದ ಸಸ್ಯೋದ್ಯಾನ ಎಂದು ಹೆಸರಿಡಲಾಗಿದ್ದು, ಇಲ್ಲಿನ ಅಪರೂಪದ ಹುಣಸೆ ನೆಡುತೋಪುಗಳು ಪರಿಸರ ಪ್ರೇಮಿಗಳನ್ನು ಸ್ವಾಗತಿಸುತ್ತವೆ.
ಹುಣಸೆ ಕುರಿತ ಹಲವು ರೀತಿಯ ಉಪಯೋಗಗಳು ಸೇರಿದಂತೆ ಅಧ್ಯಯನ ನಡೆಸುವವರಿಗೂ ಕೂಡ ಈ ಪಾರ್ಕ್ ಸಾಕಷ್ಟು ಸಹಾಯವಾಗಲಿದೆ. ಹುಣಸೆ ಬೆಳೆ ಕುರಿತು ರೈತರಲ್ಲಿಯು ಜಾಗೃತಿ ಮೂಡಿಸಿ ಆರ್ಥಿಕವಾಗಿ ಸಬರನ್ನಾಗಿಸಬಹುದು ಎಂಬ ಸಂದೇಶವನ್ನು ಸಾರಲಾಗುತ್ತಿದೆ ಅರಣ್ಯಾಧಿಕಾರಿ ರಮೇಶ.
ಇದರೊಟ್ಟಿಗೆ ಗುಡಿ ಕೈಗಾರಿಕೆಗಳಿಗೆ ಪೂರಕವಾಗಿ ಬಳಸುವಂತಹ ಬಿದಿರಿನ ವಿವಿಧ ತಳಿಗಳನ್ನು ಕೂಡ ನೆಡಲಾಗಿದೆ. ಇದಕ್ಕೆ ಬ್ಯಾಂಬೂ ಗ್ರೂವ ಎಂದು ಹೆಸರಿಡಲಾಗಿದೆ. ಸಾಮಾನ್ಯವಾಗಿ ಮಲೆನಾಡಿನ ಪ್ರದೇಶದಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುವ ಬಿದಿರಿನ ತಳಿಗಳನ್ನು ತಂದು ಈ ಸಸ್ಯೋದ್ಯಾನದಲ್ಲಿ ಬೆಳೆಸಲಾಗುತ್ತಿದೆ. ಚಿಟ್ ಬಿದಿರು, ಕಿರು ಬಿದಿರು, ಗಟ್ಟಿ ಬಿದಿರಿನ ತಳಿಯನ್ನು ಇಲ್ಲಿ ಕಾಣಬಹುದು ಅಂತಾರೆ ರಮೇಶ.
ಒಟ್ಟಾರೆ ಅರಣ್ಯ ಇಲಾಖೆಯ ನೂತನ ಕಾರ್ಯವನ್ನು ಮಾದರಿಯಾಗಿ ತೆಗೆದುಕೊಳ್ಳಲೇ ಬೇಕು. ಇಂಥ ಉದ್ಯಾನಕ್ಕೆ ನೀವು ಭೇಟಿ ನೀಡಲಿ ಎಂಬುದೇ ನಮ್ಮ ಉದ್ದೇಶ.