ತುಮಕೂರು: ಕಳೆದ 25 ವರ್ಷಗಳಲ್ಲಿ ಒಂದೇ ಕುಟುಂಬದ 11 ಮಂದಿಗೆ ಹಾವು ಕಚ್ಚಿದ್ದು, ಇದರಲ್ಲಿ ಐವರು ಮೃತಪಟ್ಟಿರುವ ಘಟನೆ ಕೊರಟಗೆರೆ ತಾಲೂಕಿನ ತೊಗರಿ ಘಟ್ಟ ಗ್ರಾಮದಲ್ಲಿ ನಡೆದಿದೆ. ಹೀಗಾಗಿ, ಉಳಿದ ಕುಟುಂಬಸ್ಥರು ತಮ್ಮ ಹೊಲಗದ್ದೆಗೆ ಹೋಗಲು ಭಯ ಪಡುತ್ತಿದ್ದಾರೆ.
ಇತ್ತೀಚೆಗಷ್ಟೇ ಈ ಕುಟುಂಬದ ಗೋವಿಂದ ರಾಜು ಎಂಬುವರು ಹೊಲದಲ್ಲಿ ನೀರು ಹಾಯಿಸಲು ಹೋದಾಗ ಹಾವು ಕಚ್ಚಿ ಮೃತಪಟ್ಟಿದ್ದರು. ಹೊಲದಲ್ಲಿ ಮೆಣಸಿನ ಗಿಡ ಬೆಳೆದಿದ್ದರೂ ಅದರ ಸಮೀಪ ಸುಳಿಯದಂತಾಗಿದೆ. ಇನ್ನೊಂದೆಡೆ, ಮಾನಸಿಕವಾಗಿ ಇಡೀ ಕುಟುಂಬವೇ ಜರ್ಜರಿತವಾಗಿದೆ.
ಅಲ್ಲದೇ, ಕೂಲಿ ಕಾರ್ಮಿಕರು ಸಹ ಇವರ ಹೊಲಗದ್ದೆಯಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ನಿರಂತರವಾಗಿ ಹಾವಿನ ದಾಳಿಗೆ ಒಳಗಾಗುತ್ತಿರುವ ಈ ಕುಟುಂಬ, ರಾಹು ಕೇತು ಪೂಜೆಯನ್ನು ಸಹ ಮಾಡುತ್ತದೆ. ಆದರೆ, ಯಾವುದೂ ಕೂಡ ಪ್ರಯೋಜನಕ್ಕೆ ಬಾರದಂತಾಗಿದೆ. ಜ್ಯೋತಿಷಿಗಳ ಮೊರೆ ಹೋದರೂ ಸಮಸ್ಯೆಗೆ ಪರಿಹಾರ ದೊರೆಯದಂತಾಗಿದ್ದು, ಕುಟುಂಬವೇ ದಿಕ್ಕಾಪಾಲಾಗಿ ಹೋಗಿದೆ.
ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಅಣ್ಣ; ಅಂತ್ಯಕ್ರಿಯೆಗೆ ಬಂದ ತಮ್ಮನಿಗೂ ಹಾವು ಕಡಿದು ಸಾವು