ತುಮಕೂರು: ರಾಜ್ಯದಲ್ಲಿ ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ ಸದ್ದು ಮಾಡುತ್ತಿದೆ. ಈ ಫೋಟೋ ಇಟ್ಟುಕೊಂಡು ನೆಟ್ಟಿಗರು ತರಹೇವಾರಿ ಶೀರ್ಷಿಕೆ ನೀಡಿ ಲೈಕ್ ಕಮೆಂಟ್ಸ್ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಜೋಡಿ ಯಾವುದು. ಏನು ಎತ್ತ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಹೌದು, ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ 45 ವರ್ಷದ ವ್ಯಕ್ತಿ ಜೊತೆ 25 ವರ್ಷದ ಯುವತಿ ವಿವಾಹವಾಗಿದ್ದಾರೆ. ಈ ವಿಷಯ ಹಾಗೂ ಫೋಟೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಂಕರ(45) ಮೇಘನಾ (25) ವಿವಾಹವಾದ ನವ ಜೋಡಿ.
ವಿಶೇಷತೆ ಏನು?
ಹೆಣ್ಣು ಸಿಗದೇ ಇದ್ದ ಶಂಕರಗೆ ಈವರೆಗೂ ಮದುವೆ ಆಗಿರಲಿಲ್ಲ. ಮೇಘನಾಳಿಗೆ ಈ ಮೊದಲೇ ಮದುವೆ ಆಗಿದ್ದು, ವಿಚ್ಛೇದನ ಆಗಿತ್ತು. ಶಂಕರ ಕನ್ಯೆ ಹುಡುಕಿ ಹುಡುಕಿ ಸುಸ್ತಾಗಿ ಮದುವೆಯೇ ಬೇಡ ಎಂದು ನಿರ್ಧರಿಸಿ ತಮ್ಮ ಪಾಡಿಗೆ ಜೀವನ ಮಾಡಿಕೊಂಡಿದ್ದರು.
ಈ ವೇಳೆ ಸ್ವತಃ ಮೇಘನಾ ಅವರು ಶಂಕರ ಅವರನ್ನು ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಇದಕ್ಕೆ ಒಪ್ಪಿಕೊಂಡ ಶಂಕರ ಅವರು ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಮದುವೆಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ.