ತುಮಕೂರು: ಕೊರೊನಾ ಸೋಂಕಿನ ಎರಡನೇ ಅಲೆ ಕಂಡು ಬರುತ್ತಿರುವ ಹಿನ್ನೆಲೆ ಈ ಬಾರಿಯ ಶಿಕ್ಷಣ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕೆಂಬುದನ್ನು ಆರೋಗ್ಯ ಇಲಾಖೆಯ ಜೊತೆ ಚರ್ಚಿಸಿದ ನಂತರ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಸಿದ್ದಗಂಗಾ ಶೈಕ್ಷಣಿಕ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ 6 ರಿಂದ 12 ನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿವೆ. ಆದರೆ ಒಂದರಿಂದ ಐದನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸಿಲ್ಲ, ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಮಕ್ಕಳ ಹಿತದೃಷ್ಟಿಯಿಂದ ಜಾಗರೂಕತೆಯ ಹೆಜ್ಜೆ ಇಡಲಿದ್ದೇವೆ ಎಂದು ಸಚಿವರು ಹೇಳಿದರು.
ಸಂಸ್ಕೃತ ಭಾಷೆಯಲ್ಲಿ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ...
ಸಂಸ್ಕೃತ ಭಾಷೆಯಲ್ಲಿ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂಬುದು ಶೇಕಡ ನೂರರಷ್ಟು ಸತ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವೇದಗಳು, ತರ್ಕ, ಜ್ಯೋತಿಷ್ಯ, ವ್ಯಾಕರಣ, ಮೊದಲಾದ ಶಾಸ್ತ್ರ ಸುಧೆಗಳು ಎಲ್ಲವೂ ಸಂಸ್ಕೃತ ಭಾಷೆಯಲ್ಲಿದೆ. ಆಗಾಧವಾದ ಜ್ಞಾನ ಮತ್ತು ಗಟ್ಟಿಯಾದ ನೆಲೆಯಿಂದ ಸಂಸ್ಕೃತ ಇಂದು ಅಸ್ತಿತ್ವದಲ್ಲಿದೆ. ಸಂಸ್ಕೃತ ಭಾಷೆಯ ಆಳ-ಅಗಲವನ್ನು ತಿಳಿಯುವುದೇ ಒಂದು ದೊಡ್ಡ ಕಾರ್ಯವಾಗಿದೆ ಎಂದು ತಿಳಿಸಿದರು.
ನಿರ್ಲಕ್ಷತೆ ನಡುವೆಯೂ ಸಂಸ್ಕೃತ ಉಳಿದಿದೆ ಎಂದರೆ ಅದಕ್ಕೆ ಮುಖ್ಯವಾಗಿ ಸಂಸ್ಕೃತ ಬೋಧಕರ ಸಂಘಟನೆ ಕಾರಣವಾಗಿದೆ. ಭಾಷೆಗಳಲ್ಲಿ ಮಧುರವಾದದ್ದು, ದಿವ್ಯವಾದದ್ದು ಸಂಸ್ಕೃತ ಭಾಷೆಯಾಗಿದೆ. ಸಂಸ್ಕೃತ ಮತ್ತು ಸಂಸ್ಕೃತಿ ಭಾರತ ದೇಶದ ಎರಡು ಅಮೂಲ್ಯ ರತ್ನ ಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಸಂಸ್ಕೃತ ಬೋಧಕರು ಹಾಜರಿದ್ದರು.