ಹುಬ್ಬಳ್ಳಿ: ಕೋವಿಡ್-19 ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೈಲು ಹಾಗೂ ವಿಶೇಷ ರೈಲುಗಳನ್ನು ಮತ್ತೆ ಆರಂಭಿಸುವುದಾಗಿ ನೈರುತ್ಯ ರೈಲ್ವೆ ಚಿಂತನೆ ನಡೆಸಿದ್ದು, ಪರೀಕ್ಷಾರ್ಥವಾಗಿ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ನೈರುತ್ಯ ರೈಲ್ವೆ ಇಲಾಖೆ, ಹುಬ್ಬಳ್ಳಿ–ಮೈಸೂರು–ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (06581/06582) ಇಂದಿನಿಂದ ಸಂಚಾರ ಆರಂಭಿಸಲಿದೆ. ಮೈಸೂರು–ವಿಜಯಪುರ–ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲು (06535/06536) ಸೆ.4 ರಿಂದ ಸೆ.9 ರವರೆಗೆ ಪರೀಕ್ಷಾರ್ಥವಾಗಿ ಸಂಚರಿಸಲಿದೆ ಎಂದು ತಿಳಿಸಿದೆ.
ಯಶವಂತಪುರ–ಕಾರವಾರ–ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (06585/06586) ಸಹ ಇಂದಿನಿಂದ ಸಂಚರಿಸಲಿದ್ದು, ಬೆಳಗಾವಿ–ಶೇಡಬಾಳ–ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆ.5 ರಿಂದ 9ರವರೆಗೆ ಮತ್ತು ಬೆಂಗಳೂರು–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು (06515/06516) ಸೆ.6 ರಿಂದ ವಾರಕ್ಕೆ ನಾಲ್ಕು ದಿನ ಸಂಚರಿಸಲಿದೆ ಎಂದು ತಿಳಿಸಲಾಗಿದೆ.
ಇನ್ನು ವೈಯಕ್ತಿಕ ಅಂತರ ಕಾಪಾಡಿಕೊಂಡು, ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಮುಂಗಡವಾಗಿ ಬುಕಿಂಗ್ ಮಾಡಿದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.