ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲೆಯ ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಎಂದು ಬರುವ ದೇಶ - ವಿದೇಶದ ಪ್ರವಾಸಿಗರ ಗುರುತಿನ ಚೀಟಿ ಸಂಗ್ರಹಿಸಲು ಹಂಪಿ ವೃತ್ತದ ಭಾರತೀಯ ಸರ್ವೇಕ್ಷಣಾ ಪುರಾತತ್ವ
ಇಲಾಖೆ ನಿರ್ಧರಿಸಿದೆ.
ದೇಶದ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಇದೀಗ ಮತ್ತೊಂದು ನಿಯಮಾವಳಿ ಜಾರಿಗೆ ತರಲಾಗಿದೆ.
ಹೌದು, ವಿಶ್ವ ಪ್ರಸಿದ್ಧ ಹಂಪಿ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಕಡ್ಡಾಯವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಲಘು ಅಥವಾ ದ್ವಿಚಕ್ರ ವಾಹನ ಚಾಲನಾ ಪತ್ರದ ಪರವಾನಗಿ ಚೀಟಿ, ಮತದಾರರ ಗುರುತಿನ ಚೀಟಿ ಸೇರಿದಂತೆ ಇನ್ನಿತರ ಗುರುತಿನ ಚೀಟಿ ಸಂಗ್ರಹಿಸಲು ಹಂಪಿ ವೃತ್ತದ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯು ನಿರ್ಧರಿಸಿದ್ದು, ಹಂಪಿ ಬ್ಲಾಗ್ ನಲ್ಲಿ ಪ್ರವೇಶ ಶುಲ್ಕದ ಜೊತೆಗೆ ಕೆಲ ನಿಯಮಗಳನ್ನು ಕೂಡ ಮುದ್ರಿಸಿದೆ.
ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಪ್ರವಾಸಿಗರಿಂದ ಮಹಾಮಾರಿ ಸೋಂಕು ಪತ್ತೆಯಾದರೆ ಅವರನ್ನು ಸುಲಭವಾಗಿ ಬಹು ಬೇಗನೆ ಪತ್ತೆಹಚ್ಚಬಹುದು ಎನ್ನುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಹೀಗಾಗಿ, ಹಂಪಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರಿಂದ ಇನ್ಮುಂದೆ ಮನೆಯ ವಿಳಾಸ ಹಾಗೂ ಮೊಬೈಲ್ ನಂಬರ್ ವುಳ್ಳ ಗುರುತಿನ ಚೀಟಿ ಕಡ್ಡಾಯವಾಗಿ ಸಂಗ್ರಹಿಸಲು ನಿರ್ಧರಿಸಿದೆ.