ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಸಂಭವಿಸಿರುವ ಆಸ್ತಿ ಪಾಸ್ತಿ ನಷ್ಟದ ಪ್ರಮಾಣ ನಿರ್ಣಯಿಸಲು ಕ್ಲೇಮ್ ಕಮಿಷನರ್ ಆಗಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್. ಕೆಂಪಣ್ಣ ಅವರನ್ನು ಹೈಕೋರ್ಟ್ ನೇಮಕ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಉಂಟಾಗಿರುವ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ಹಾನಿಯ ವೆಚ್ಚವನ್ನು ಗಲಭೆ ನಡೆಸಿದ ದುಷ್ಕರ್ಮಿಗಳಿಂದಲೇ ಭರಿಸಿಕೊಳ್ಳಲು ನಿರ್ಧರಿಸಿದ್ದ ಸರ್ಕಾರ, ನಷ್ಟವನ್ನು ಅಂದಾಜು ಮಾಡಿ, ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಆಯುಕ್ತರನ್ನು ನೇಮಕ ಮಾಡುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಇದೀಗ ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಇಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್. ಕೆಂಪಣ್ಣ ಅವರನ್ನು ಕ್ಲೇಮ್ ಕಮಿಷನರ್ ಆಗಿ ನೇಮಕ ಮಾಡಿದೆ ಎಂದು ಸಿಎಂ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.