ಬೆಂಗಳೂರು : ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕೃಷ್ಣಬೈರೇಗೌಡ ಭೇಟಿ ಮಾಡಿ ಮಾತುಕತೆ ನಡೆಸಿದರು.
ಬೆಂಗಳೂರಿನ ಶಿವಾನಂದ ವೃತ್ತದ ಸಮೀಪದ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ತಮಿಳುನಾಡು, ಪುದುಚೇರಿ, ಗೋವಾ ಉಸ್ತುವಾರಿಯಾಗಿ ಎಐಸಿಸಿ ವತಿಯಿಂದ ನೇಮಕವಾಗಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಚುನಾವಣಾ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡಿರುವ ಮಾಜಿ ಸಚಿವ ಕೃಷ್ಣಬೈರೇಗೌಡ ಅವರನ್ನು ಸಿದ್ದರಾಮಯ್ಯ ಅಭಿನಂದಿಸಿ ಶುಭ ಹಾರೈಸಿದರು.
ರಾಷ್ಟ್ರೀಯ ನಾಯಕರು ನಿಮ್ಮ ಮೇಲೆ ಇಟ್ಟಿರುವ ಭರವಸೆ ಉಳಿಸಿಕೊಳ್ಳಿ, ವಿಶೇಷ ಕಾಳಜಿವಹಿಸಿ ಪಕ್ಷದ ಪ್ರಗತಿಗೆ ಶ್ರಮಿಸಿ. ನಿಮಗೆ ಅಗತ್ಯ ಸಲಹೆ ಸಹಕಾರ ನೀಡಲು ನಾವು ಸದಾ ಸಿದ್ಧ ಎಂದು ಸಿದ್ದರಾಮಯ್ಯನವರು ಇಬ್ಬರು ನಾಯಕರಿಗೆ ಭರವಸೆ ನೀಡಿದರು.
ಇನ್ನು ಅಖಿಲ ಕರ್ನಾಟಕ ಟೋಕರೆ ಕೋಲಿ/ಕೋಲಿ/ಕಬ್ಬಲಿಗ ಬುಡಕಟ್ಟು ಪಂಗಡಗಳ ಸುಧಾರಣಾ ಸಮಿತಿ ಪದಾಧಿಕಾರಿಗಳು ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಿದ್ದರಾಮಯ್ಯ, ತಳವಾರ, ಪರಿವಾರ ಹಾಗೂ ಗೊಂಡ ಸಮುದಾಯದವರಿಗೆ ಕಲಬುರ್ಗಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿ ತಿಳಿಸಿದರು.