ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ಕೋರ್ ಕಮಿಟಿ ಶೀಘ್ರದಲ್ಲೇ ಮಾಡುತ್ತದೆ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರದಲ್ಲಿ ಮಾಜಿ ಶಾಸಕ ಮುನಿರತ್ನ ಅವರಿಗೆ ಟಿಕೆಟ್ ಕೊಡಬೇಕಾ?, ಬೇಡವಾ? ಎನ್ನುವುದನ್ನು ಪಕ್ಷದ ನಾಯಕತ್ವವೇ ನಿರ್ಧರಿಸುತ್ತದೆ. ಈ ವಿಷಯವನ್ನು ಬಹಿರಂಗವಾಗಿ ಚರ್ಚೆ ಮಾಡಲಾಗದು. ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಣೆ ಹೊರಬೀಳುತ್ತದೆ ಎಂದರು.
ಬಿಜೆಪಿಯೇ ಗೆಲ್ಲುತ್ತದೆ :
ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ಕೋವಿಡ್ ನಿರ್ವಹಣೆ, ನೆರೆ ಸೇರಿ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ. ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ರಾಜರಾಜೇಶ್ವರಿ ನಗರ ಮತ್ತು ಶಿರಾ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷವೇ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ. ಚುನಾವಣೆಗೆ ಪಕ್ಷ ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಸಿಎಂ ತಿಳಿಸಿದರು.